ಸುಳ್ಯ: ಅತೀಯಾದ ಮೊಬೈಲ್ ಬಳಕೆ ಮಾಡಿದ ಬಗ್ಗೆ ಬುದ್ಧಿವಾದ ಹೇಳಿದ್ದಕ್ಕೆ ಮನೆಬಿಟ್ಟು ಹೋದ ಬಾಲಕ
ಸುಳ್ಯ: ಮೊಬೈಲ್ ನೋಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡು 16 ವರ್ಷದ ಅಪ್ರಾಪ್ತ ಬಾಲಕನೋರ್ವ ಮನೆಯಿಂದ ಹೊರಟುಹೋಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪತಿ ಮತ್ತು ಮಗನೊಂದಿಗೆ ವಾಸವಾಗಿರುವ ಸಲ್ಮಾ (40) ಎಂಬವರ ಮಗ ಸೈಯದ್ ಆಲಿ ಸೈಯದ್ ಗೌಸ (16) ನಾಪತ್ತೆಯಾದ ಬಾಲಕ.
ಮೇ.30ರಂದು ಬೆಳಿಗ್ಗೆ ಬಾಲಕ ಸೈಯದ್ ಆಲಿ ಮೊಬೈಲ್ ವೀಕ್ಷಿಸುತ್ತಿದ್ದಾಗ, ತಾಯಿ ಸಲ್ಮಾ ಅವರು ಆತನಿಗೆ ಬೈದು ಬುದ್ಧಿಮಾತು ಹೇಳಿದ್ದರು. ಇದರಿಂದ ಮನಸ್ತಾಪಗೊಂಡ ಬಾಲಕನು ಸ್ವಲ್ಪ ಸಮಯದ ಬಳಿಕ ಮನೆಯಿಂದ ಹೊರಗೆ ಹೋಗಿದ್ದಾನೆ. ಆದರೆ, ತಡವಾದರೂ ಆತ ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು, ಆತನ ಗೆಳೆಯರು ಹಾಗೂ ಸಂಬಂಧಿಕರ ಮನೆಗಳಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯೂ ಬಾಲಕನ ಪತ್ತೆ ಸಾಧ್ಯವಾಗಿಲ್ಲ.
ಈ ಕುರಿತು ತಾಯಿ ಸಲ್ಮಾ ಅವರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.





