June 2, 2026

ಉಪ್ಪಿನಂಗಡಿ: ಕಾರು, ಗ್ಯಾಸ್ ಸಿಲಿಂಡರ್ ಲಾರಿ ನಡುವೆ ಅಪಘಾತ: ಒಂದೇ ಕುಟುಂಬದ ಐವರು ಯಾತ್ರಾರ್ಥಿಗಳು ಗಂಭೀರ

0
image_editor_output_image2017851341-1780389980173.jpg

ಉಪ್ಪಿನಂಗಡಿ: ಕೂಟೇಲು ಎಂಬಲ್ಲಿ ಸೋಮವಾರ ರಾತ್ರಿ ಕಾರು ಮತ್ತು ಗ್ಯಾಸ್ ಸಿಲಿಂಡರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಯಾತ್ರಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆ ನಿವಾಸಿಯಾದ ಕುಟುಂಬವೊಂದರ ಸದಸ್ಯರು ವ್ಯಾಗನರ್ ಕಾರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆ ಕೈಗೊಂಡಿದ್ದರು. ಉಪ್ಪಿನಂಗಡಿಯ ಕೂಟೇಲು ಸಮೀಪ ಕಾರು ಸಂಚರಿಸುತ್ತಿದ್ದ ವೇಳೆ, ಎದುರಿನಿಂದ ಬಂದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿಯೊಂದು ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಚಾಲಕ ದೀಪಕ್ (45 ವರ್ಷ), ಯಾತ್ರಾರ್ಥಿಗಳಾದ ಗುರುರಾಜ್ (46 ವರ್ಷ), ಧನುಷ್ (15 ವರ್ಷ), ಭಾರತಿ (48 ವರ್ಷ) ಹಾಗೂ ಗೀತಾ (55 ವರ್ಷ) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!