ನಟಿಯ ಡೀಪ್‌ಫೇಕ್ ವಿಡಿಯೋ, ಫೋಟೋ ವೈರಲ್: 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ FIR ದಾಖಲು
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ರುಕ್ಮಿಣಿ ವಸಂತ್ ಅವರ ನಕಲಿ (ಡೀಪ್‌ಫೇಕ್) ಬಿಕಿನಿ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಚಾರಿತ್ರ್ಯ ಹರಣಕ್ಕೆ ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸೃಷ್ಟಿಸಲಾಗಿದ್ದ ಈ ನಕಲಿ ದೃಶ್ಯಗಳ ವಿರುದ್ಧ ಸ್ವತಃ ನಟಿ ಸೈಬರ್ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು.
ಬೇರೆ ಮಹಿಳೆಯೊಬ್ಬರ ದೇಹಕ್ಕೆ ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ತನ್ನ ಮುಖವನ್ನು ಡಿಜಿಟಲ್ ಆಗಿ ಜೋಡಿಸಲಾಗಿದೆ. ಈ ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ತಮಗೆ ತೀವ್ರ ಮುಜುಗರ ಉಂಟುಮಾಡಲಾಗಿದ್ದು, ತಮ್ಮ ಘನತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ರುಕ್ಮಿಣಿ ವಸಂತ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ನಟಿಯ ದೂರು ಆಧರಿಸಿ ಕಾರ್ಯಪ್ರವೃತ್ತರಾಗಿರುವ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು, ನಕಲಿ ವಿಡಿಯೋಗಳನ್ನು ಅಪ್ಲೋಡ್ ಹಾಗೂ ಶೇರ್ ಮಾಡಿದ್ದ ಒಟ್ಟು 29 ಪ್ರಮುಖ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇದರಲ್ಲಿ 14 ಎಕ್ಸ್ (ಟ್ವಿಟರ್) ಅಕೌಂಟ್‌ಗಳು, 9 ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳು ಹಾಗೂ 6 ಫೇಸ್‌ಬುಕ್ ಪೇಜ್‌ಗಳು ಸೇರಿವೆ. ಈ ಎಲ್ಲಾ ಖಾತೆಗಳ ಐಪಿ ಅಡ್ರೆಸ್ ಹಾಗೂ ಬಳಕೆದಾರರ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.





