ರಜೆ ಕಳೆದು ಜ್ಞಾನದ ಬೆಳಕಿನತ್ತ.. ಶಾಲಾ ಪ್ರಾರಂಬೋತ್ಸವ – 2026
School kids running in schoolyard
ಬಾಲ್ಯ ಎಂದಿಗೂ ನೂತನ ; ಮತ್ತೆ ಬಾರದ ಜೀವನದ ಸುಮಧುರ , ಸುವರ್ಣ ಕಾಲ. ಹಿರಿಯರ ಜವಾಬ್ಧಾರಿ ಮತ್ತು ಪ್ರೀತಿಯ ಧಾರೆ, ಕಿರಿಯರ ಕಲಿಯುವಿಕೆ, ಸಕಲರ ಕ್ಷಮೆ ಇರುವ ಸುಂದರ ಕಾಲ. ಹಸಿಗೋಡೆಯಂತಿರುವ ಮನಸು, ಸದಾ ಹೊಸ ಯೋಚನೆ, ಹೊಸತನ್ನು ಸೇರಿಸಿಕೊಳ್ಳುವ ತವಕ, ಸದಾ ವಸಂತವಿರುವ ಉತ್ಸಾಹದ ಕ್ಷಣವಿರುತ್ತ ಸಾಗುವ ವೈವಿಧ್ಯ ತೆಯ ಸಮಯ.

ಮಳೆ ಏನು ಕೊಟ್ಟರೂ ಹೀರುವ ವಸುಧೆಯಂತಿರುವ ಮನವಿರುವ ಎಳೆ ಹೃದಯವಂತ ಹಸುಳೆಗಳ ಸಂತಸದ ದಿನವಿದು. ಎಲ್ಲೆಡೆಯಲ್ಲೂ ಸಂಭ್ರಮ, ಮನೆಯಲ್ಲೂ, ಪೇಟೆಯಲ್ಲೂ, ಶಾಲೆಯಲ್ಲೂ. ಮಕ್ಕಳ ಹೊಸ ಸಮವಸ್ತ್ರ, ಹೊಸ ಪುಸ್ತಕ, ಈ ವರ್ಷದ ಬದಲಾದ ಶಾಲಾ ಕೊಠಡಿಯ ಹೊಸ ಸ್ಥಳ, ಹೊಸ ಸ್ನೇಹಿತರು, ವಿಷಯವಾರು ಶಿಕ್ಷಕರು ಯಾರೆಂಬ ಕುತೂಹಲ, ಹೊಸ ಪುಟ ತೆರೆಯಲು ಮನದ ಮೂಲೆಯಲ್ಲೊಂದು ಹೊಸ ಆಶಾಭಾವ, ಹೊಸ ಚಪ್ಪಲ್, ಬಣ್ಣದ ಬಳೆ, ಚೀಲ, ವಾಟರ್ ಕ್ಯಾನ್, ಪೆನ್ನು ಪೆನ್ಸಿಲ್, ಅಮ್ಮ, ಅಪ್ಪ ,ಅಜ್ಜಿ, ಮಾವ ಹೀಗೆ ತೆಗೆದು ಕೊಟ್ಟವರ ವಿಚಾರ ವಿನಿಮಯ, ರಜೆಯ ಹೊಸ ಅನುಭವಗಳ ಹಂಚಿಕೆ ಎಲ್ಲವೂ ರಂಗೇರುವ ಸುದಿನ.
ಸರಕಾರವು ವಿದ್ಯಾರ್ಥಿಗಳಿಗೆ ಇದೊಂದು ಹಬ್ಬವಾಗಬೇಕೆಂದು ಯತ್ನಿಸಿ ಪ್ರವೇಶ ಹಬ್ಬದ ಸುತ್ತೋಲೆ ಹೊರಡಿಸಿದೆ. ಕ್ರಿಯಾಶೀಲ ಶಿಕ್ಷಕರ ಉತ್ಸಾಹ ಇದಕ್ಕೆ ಪೋಷಣೆ ಕೊಟ್ಟು ಇನ್ನಷ್ಟು ವಿಜೃಂಭಣೆಯ ಮೆರುಗು ನೀಡುತ್ತಿವೆ. ಕೆಲವು ಖಾಸಗಿ ಸಂಸ್ಥೆಗಳು ತಮ್ಮ ದಾಖಲಾತಿಗಳ ಏರಿಕೆಗೆ ಇದನ್ನು ಒಂದು ವೇದಿಕೆಯಾಗಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಉಪಯೋಗಿಸುತ್ತಿವೆ. ಬೆಳಕು ಚೆಲ್ಲಿ , ಕುಂಕುಮ ಹಚ್ಚಿ, ಪನ್ನೀರು ಹೂ ಚೆಲ್ಲಿ ಎದುರುಗೊಳ್ಳುವ ಸಂಭ್ರಮ, ಸಿಹಿ ಹಂಚಿ ತಿನ್ನಿಸಿ, ಪೋಷಕರ ಜೊತೆ ಸೇರಿಸಿಕೊಳ್ಳುವ ಸು-ಸಂಸ್ಕಾರ ಮತ್ತೆ ಕದ ತಟ್ಟಿ ಹೆಮ್ಮೆಯನ್ನು ಹೆಚ್ಚಾಗಿಸಿವೆ.
“ವಿದ್ಯಾರ್ಥಿಗಳ ಮನಸ್ಸು ಧಾನ್ಯ ತುಂಬುವ ಚೀಲಗಳಾಗದೆ ಧಾನ್ಯ ಬೆಳೆಯುವ ಗದ್ದೆಗಳಾದರೆ ಚೆನ್ನ”. ಈ ನಿಲುವು ಪ್ರತಿ ಮಗುವಿನ ಮನಸಿಗೆ ತಲುಪಿದರೆ ಸೂಕ್ತ. ಹಾಗೆ ಮಾಡಲು ಪೋಷಕರಿಗೂ ಮಾರ್ಗದರ್ಶನವಿತ್ತರೆ ಒಳಿತು. ಬಲಿಯುವ ಮಕ್ಕಳಿಗೆ ಯಾಂತ್ರೀಕೃತವಾಗುತ್ತಿರುವ ಬದುಕು, ಆಹಾರ, ಜೀವನ ಶೈಲಿ , ಮೀಡಿಯಾಗಳು ಪೂರಕ ಎನ್ನುವುದಕ್ಕಿಂತಲೂ ಮಾರಕವಾಗಿರುವ ಸಂದಿಗ್ಧತೆ ಹಿರಿಯರನ್ನು ಕಾಡುತ್ತಿದೆ.
ಒಮ್ಮೆ ನಮ್ಮ ಮಕ್ಕಳು ಒಳ್ಳೆಯ ದಾರಿ ಹಿಡಿಯಲಿ ಎಂಬ ಆಶಯದಿಂದಲೇ ಆತಂಕದಿಂದ ಅಡಿಯಿಡುವ ದಿನಗಳು ಹಿರಿಯರೆದುರಿಗೆ ನಿಲ್ಲುತ್ತಿವೆ.
ಶಾಲಾ ವಾಹನಗಳ ಚಾಲಕರಿಗೂ, ಶಾಲಾ ಮೇಲುಸ್ತುವಾರಿಯವರಿಗೂ, ಶಾಲಾ ಅಡುಗೆಮನೆಯ ಸಿಬ್ಬಂದಿಯವರಿಗೂ ಒಟ್ಟು ತಳಮಳ. ನೀರಿಲ್ಲದ ತವಕ ಕೆಲವರದ್ದು. ಶಾಲಾ ಸೂರು ಸರಿ ಇಲ್ಲದಿದ್ದರೆ ಮತ್ತೊಂದು, ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತಾ ಕ್ರಮ, ಶುಚಿತ್ವ, ಶಾಲಾ ಶುಲ್ಕಗಳ ಸಂಗ್ರಹ , ಪೋಷಕರಿಗೆ ಸಾಂತ್ವನ ಹೀಗೆ ಹಬ್ಬದ ನಡುವೆ ಜವಾಬ್ದಾರಿ ಹೊತ್ತವರದ್ದು ಮುಗಿಯದ ಜಂಜಾಟ.
ಮಳೆ ಹನಿಯಡಿಯಲ್ಲಿ ಕೊಡೆಗಳ ಆಶ್ರಯ, ಹೊಸ ಸಮವಸ್ತ್ರ, ಹೊಸ ಬ್ಯಾಗುಗಳ ತೋರಣ ನಮಗೆ ಪ್ರಾರಂಭೋತ್ಸವ ದ ಮೇರುಗಲ್ಲಿ ಕಾಣುತ್ತವೆ. ಆದರೆ ಈ ವಿಜೃಂಭಣೆಯ ನಡುವೆ ಹೆತ್ತವರ ಶ್ರಮದ ಕಣ್ಣೀರ ಹನಿ ಮಕ್ಕಳ ಮುಗ್ದ ನಗೆಗೆ ಕಾರಣವಾಗಿದೆ ಎಂಬುದನ್ನು ನಾವೆಲ್ಲ ಅರಗಿಸಿಕೊಳ್ಳಲೇಬೇಕು. ಹಿಂದಿನ ತಲೆಮಾರು ಪದವಿಯ ವರೆಗಿನ ವಿದ್ಯಾಭ್ಯಾಸಕ್ಕೆ ವ್ಯಯಿಸಿದ ಖರ್ಚನ್ನು ಪ್ರಸ್ತುತ ಹೆತ್ತವರು ಒಂದನೇ ತರಗತಿಯ ವ್ಯಾಸಾಂಗಕ್ಕೇ ವ್ಯಯಿಸುತ್ತಾರೆ. ಸರಕಾರಿ ಶಾಲೆಗಳು ಇದಕ್ಕೆ ಪರಿಹಾರವಾಗಿದ್ದರೂ, ಸರಿಯಾದ ವ್ಯವಸ್ಥೆಯಿದ್ದಲ್ಲಿ ಮಾತ್ರ ಅಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಪ್ರತಿಷ್ಠೆಗಾಗಿ ಮತ್ತು ಮಗುವಿನ ಗೆಳೆಯರಿದ್ದಾರೆ ಎಂಬ ಕಾರಣಕ್ಕಾಗಿ ವಿಶೇಷ ಲಕ್ಷ್ಯ ವಹಿಸಿ, ನೋವನ್ನು ಅದುಮಿಟ್ಟು ಹೆತ್ತವರು ಕಳುಹಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಓ… ಗುರು ಸಮೂಹವೇ ನನ್ನ ಮಗುವನ್ನು ನಿಮ್ಮ ಮಗುವಂತೆ ಕಾಣಿರಿ ಎಂಬ ಭಾವುಕತನದಿಂದ , ಓ ಸರಕಾರವೇ ಮಕ್ಕಳ ಸುರಕ್ಷೆಗೆ ನೀವೇ ” ಶ್ರೀ ರಕ್ಷೆ ” ಎಂಬ ನಂಬಿಕೆಯಿಂದ, ವಾಹನ ಚಾಲಕರೇ ನೀವೇ ರಕ್ಷಾ ಸಾರಥಿಗಳೆಂಬ ಭರವಸೆಯೊಂದಿಗೆ, ವಿದ್ಯಾಮಾತೆಯು ಶಿಶು ಸಮೂಹವನ್ನು ಆಶೀರ್ವದಿಸಿ, ಶ್ರೇಯಸ್ಸು ನೀಡಲಿ ಎಂಬ ಹಾರೈಕೆ ಈ ದಿನ ಪ್ರತೀ ಹೆತ್ತೊಡಲಲ್ಲೂ ಅನುರಣಿಸುತ್ತಲೇ ಇರುತ್ತದೆ.
ಶಾಲಾ ಪ್ರಾರಂಭೋತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಬೆಳಕನ್ನು ಹರಡುವ ಶುಭಾರಂಭವಾಗಿದೆ. ಪ್ರತಿ ವಿದ್ಯಾರ್ಥಿಯೂ ಈ ದಿನವನ್ನು ಉತ್ಸಾಹದಿಂದ ಆಚರಿಸಿ, ತನ್ನ ಶಿಕ್ಷಣಯಾನವನ್ನು ಯಶಸ್ವಿಯಾಗಿ ಮುಂದುವರಿಸಿದಲ್ಲಿ ಭವಿಷ್ಯದ ಭವ್ಯ ಪ್ರಜೆಗಳು ಪ್ರತೀ ದಿನ ರೂಪುಗೊಳ್ಳುತ್ತಲೇ ಇರುತ್ತಾರೆ.
ರಾಧಾಕೃಷ್ಣ ಎರುಂಬು
ಉನ್ನತ ಶಿಕ್ಷಣ ಅಧಿಕಾರಿಗಳು
ಜನಪ್ರಿಯ ಶಿಕ್ಷಣ ಸಂಸ್ಥೆಗಳು ಹಾಸನ.





