ರೇಡಿಯೊ ಜಾಕಿ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ
ಬೆಂಗಳೂರು: ಮುಂಬೈನಲ್ಲಿ ರೇಡಿಯೊ ಜಾಕಿ (RJ) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನಗರದ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 23 ರಂದು ನಡೆದಿದೆ.
ಮುಂಬೈ ಮೂಲದ ಮನೀಷಾ ಪ್ರಸಾದ್ (48) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಹರ್ಷವರ್ಧನ್ ಸಿಂಗ್ ಬನ್ಸಾಲ್ ಎಂಬಾತನ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮನೀಷಾ ಪ್ರಸಾದ್ ಅವರು ಮುಂಬೈನಲ್ಲಿ ರೇಡಿಯೊ ಜಾಕಿಯಾಗಿದ್ದರು. ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ 2024 ರಲ್ಲಿ ಅವರು ತಮ್ಮ ಪತಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆದಿದ್ದರು. ವಿಚ್ಛೇದನದ ಬಳಿಕ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಮಾಚಲ ಪ್ರದೇಶ ಮೂಲದ ಹರ್ಷವರ್ಧನ್ ಸಿಂಗ್ ಬನ್ಸಾಲ್ ಎಂಬಾತನ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ನಂತರ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ (ಸಹಜೀವನ) ಇದ್ದರು ಎನ್ನಲಾಗಿದೆ.





