ಕೊಡಗು: ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಮಹಿಳೆ ಬಲಿ
ಕೊಡಗು: ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿ ಮಹಿಳೆಯೊಬ್ಬರು ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಬಲಿಯಾದ ದಾರುಣ ಘಟನೆ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ.
ಚೆನ್ನೈ ಮೂಲದ ಜಿನ್ನು (33) ಎಂಬ ಮಹಿಳೆ ಆನೆಗಳ ನಡುವಿನ ಜಗಳದ ವೇಳೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಶಿಬಿರದ ಸಾಕಾನೆಗಳಾದ ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಆನೆಗಳನ್ನು ನದಿಗೆ ಕರೆತರಲಾಗಿತ್ತು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ಸ್ನಾನ ಮಾಡಿಸಲು ನೀರಿಗೆ ಇಳಿಸುತ್ತಿದ್ದರು. ಈ ವೇಳೆ ಮಾರ್ತಾಂಡ ಆನೆಯನ್ನು ನೀರಿಗೆ ಸ್ವಲ್ಪ ಜೋರಾಗಿ ಇಳಿಸಿದಾಗ (ಬೀಳಿಸಿದಾಗ), ಅದು ಪಕ್ಕದಲ್ಲಿದ್ದ ಕಂಜನ್ ಆನೆಗೆ ತಗುಲಿದೆ ಎನ್ನಲಾಗಿದೆ.
ಸಿಡಿದೆದ್ದ ಕಂಜನ್, ಬಲಿಯಾದ ಪ್ರವಾಸಿ ಮಹಿಳೆ
ತನ್ನ ದೇಹಕ್ಕೆ ಮಾರ್ತಾಂಡ ಆನೆ ಸ್ಪರ್ಶಿಸುತ್ತಿದ್ದಂತೆಯೇ ಕಂಜನ್ ಆನೆ ವಿಪರೀತ ಆಕ್ರೋಶಗೊಂಡಿದೆ. ತಕ್ಷಣವೇ ಮಾರ್ತಾಂಡನ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಎರಡು ಬೃಹತ್ ಆನೆಗಳ ನಡುವೆ ಇದ್ದಕ್ಕಿದ್ದಂತೆ ಶುರುವಾದ ಈ ಘರ್ಷಣೆಯಿಂದಾಗಿ ಅಲ್ಲಿದ್ದ ಪ್ರವಾಸಿಗರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಆದರೆ, ದುರದೃಷ್ಟವಶಾತ್ ಪ್ರವಾಸಿ ಮಹಿಳೆ ಜಿನ್ನು ಅವರು ಆನೆಗಳ ಜಗಳದ ರಭಸಕ್ಕೆ ಸಿಲುಕಿದ್ದಾರೆ. ಆನೆಯ ಕಾಲಡಿ ಸಿಲುಕಿದ ಅಥವಾ ದಾಳಿಗೆ ಒಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.





