ಪುತ್ತೂರು: ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ: ಸವಾರನಿಗೆ ಗಂಭೀರ ಗಾಯ
ಪುತ್ತೂರು: ಪುತ್ತೂರು-ಮಾಣಿ ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಮಹಿಂದ್ರಾ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕಬಕ ನಿವಾಸಿ, ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡಿಕೊಂಡಿದ್ದ ಜನಾನುರಾಗಿ ಸಲೀಂ (52) (ಸೋಫಾ ಸಲೀಂ ಎಂದೇ ಪರಿಚಿತರು) ಗಾಯಗೊಂಡ ದುರ್ದೈವಿ. ಸಾಧು ಸ್ವಭಾವದ ಸಲೀಂ ಅವರು ಮಿತ್ತೂರು ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸವನ್ನು ನೋಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಬಕ ಕಡೆಯಿಂದ ಮಿತ್ತೂರು ಕಡೆಗೆ ಮಿತಿಮೀರಿದ ವೇಗದಲ್ಲಿ ಬಂದ ಮಹಿಂದ್ರಾ ಪಿಕಪ್ ವಾಹನವು ಸಲೀಂ ಅವರ ಆಕ್ಟಿವಾ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಸಲೀಂ ಅವರು ಹೆಲ್ಮೆಟ್ ಧರಿಸಿದ್ದಾಗ್ಯೂ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಹಾಗೂ ದಾರಿಹೋಕರು ಸೇರಿ ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.





