ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನದ ಸರ, ನಗದು ಕಳವು: ಕೇವಲ 2 ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು
ಕೊಲ್ಲೂರು: ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ಮೂಲದ ಭಕ್ತರೊಬ್ಬರಿಂದ ಕಳುವಾಗಿದ್ದ ಎರಡು ಚಿನ್ನದ ಸರಗಳು ಹಾಗೂ ನಗದು ಇದ್ದ ಪರ್ಸ್ ಅನ್ನು ಕೊಲ್ಲೂರು ಪೊಲೀಸರು ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಬುಧವಾರ ದೇವಾಲಯದ ಆವರಣದಲ್ಲಿ ಈ ಕಳ್ಳತನ ನಡೆದಿದೆ. ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದನ್ನು ಗಮನಿಸಿದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದರು. ದೇವಾಲಯದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಕಳ್ಳತನ ನಡೆದ ಕೇವಲ ಎರಡು ಗಂಟೆಗಳ ಒಳಗಾಗಿ ಕದ್ದ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಕೊಲ್ಲೂರು ಪಿಎಸ್ಐ ಭೀಮಾಶಂಕರ್ ನೇತೃತ್ವದ ಪೊಲೀಸ್ ಸಿಬ್ಬಂದಿ ಈ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ವಶಪಡಿಸಿಕೊಂಡ ಚಿನ್ನದ ಸರಗಳು ಮತ್ತು ನಗದನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಲಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆದ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.





