May 2, 2026

ಉಡುಪಿ: ಮಾಲಕನ ಮೇಲೆ ಆ್ಯಸಿಡ್ ದಾಳಿ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

0
image_editor_output_image-875270290-1777708472249.jpg

ಉಡುಪಿ: ಕೆಲಸದ ವಿಷಯದಲ್ಲಿ ಉಂಟಾದ ಸಣ್ಣ ಜಗಳದಿಂದಾಗಿ ತನ್ನ ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಕೇರಳ ಮೂಲದ ರತೀಶ್ ಕೆ.ಟಿ. (42) ಶಿಕ್ಷೆಗೊಳಗಾದ ಆರೋಪಿ. 2022ರ ಫೆಬ್ರವರಿ 28ರಂದು, ಕೇರಳದ ತ್ರಿಶೂರ್ ಜಿಲ್ಲೆಯ ಸುಧೀರ್ ಪಿ.ಎ. ಅವರು ಹೆಬ್ರಿ ತಾಲೂಕಿನ ಚಾರ ಗ್ರಾಮದ ಮಂಡಾಡಿಜಡ್ಡುವಿನಲ್ಲಿರುವ ಅಜಿತ್ ಅಗಸ್ಟೀನ್ ಅವರ ತೋಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸುಧೀರ್ ಅವರು ರತೀಶ್‌ಗೆ, “ನೀನು ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಇಲ್ಲಿನ ಕೆಲಸಗಾರರನ್ನು ಗಮನಿಸಿ ಕಲಿ” ಎಂದು ಸಲಹೆ ನೀಡಿದ್ದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.

ಈ ಘಟನೆಯಿಂದ ರತೀಶ್ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ. ಮಾರ್ಚ್ 2ರಂದು ರಾತ್ರಿ ಸುಮಾರು 1 ಗಂಟೆಗೆ ಸುಧೀರ್ ಮಲಗಿದ್ದಾಗ, ರತೀಶ್ ಅವರ ಮುಖ ಮತ್ತು ಎದೆಗೆ ಬಿಸಿ ರಾಸಾಯನಿಕ ಆ್ಯಸಿಡ್ ಸುರಿದು ಪರಾರಿಯಾಗಿದ್ದನು.

ತೀವ್ರವಾಗಿ ಗಾಯಗೊಂಡಿದ್ದ ಸುಧೀರ್ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದರು. ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಸ್ತುತ ಆರೋಪಿ ರತೀಶ್ ಕೆ.ಟಿ. ಪ್ರಸ್ತುತ ಹಿರಿಯಡ್ಕ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

Leave a Reply

Your email address will not be published. Required fields are marked *

error: Content is protected !!