ಉಳ್ಳಾಲ: ಆರಿಫ್ ಕೊಲೆ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿಯ ಬಂಧನ
ಉಳ್ಳಾಲ: ತೊಕ್ಕೊಟ್ಟು ಫ್ಲೈ ಓವರನ್ ನಲ್ಲಿ ಇತ್ತೀಚೆಗೆ ನಡೆದ ರೌಡಿ ಶೀಟರ್ ಆರಿಫ್ ಹುಸೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮುಹಮ್ಮದ್ ಸುಹೈಲ್ ಅಲಿಯಾಸ್ ಚಿಯಾ(24) ಬಂಧಿತ ಆರೋಪಿ.
ಆರೋಪಿಯು ಆರಿಫ್ ಮೇಲೆ ನಡೆದ ಮೊದಲ ದಾಳಿಗೆ ಮುಹಮ್ಮದ್ ಸುಹೈಲ್ ಸಹಕಾರ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ವಿವರವಾದ ತನಿಖೆಯ ನಂತರ ಸುಹೈಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮುಹಮ್ಮದ್ ಸುಹೈಲ್ ಬಂಧನದೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಆರಿಫ್ ಕೊಲೆ ಪ್ರಕರಣದಲ್ಲಿ 15 ಮಂದಿ ಭಾಗಿಯಾಗಿರುವುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿತ್ತು. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಳೆದ ಮಾರ್ಚ್ 27ರ ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕಿನಲ್ಲಿ ಸಂಚರಿಸುತ್ತಿದ್ದ ಆರಿಫ್ ನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದರು.





