April 24, 2026

ಮನೆಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವು

0
image_editor_output_image975329699-1776676078344.jpg

ದಾವಣಗೆರೆ: ಮಹಿಳೆಯೊಬ್ಬಳು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್‌ನಲ್ಲಿ ನಡೆದಿದೆ.

ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆಯನ್ನು ಕಾವ್ಯಾ (26) ಎಂದು ಗುರುತಿಸಲಾಗಿದೆ. ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಮನು ಅಂಚೆ ಇಲಾಖೆಯಲ್ಲಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲಸೋಲ ಮಾಡಿ 2.50 ಲಕ್ಷ ರೂ. ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರು.

ಶನಿವಾರ (ಏ.18) ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ ಕಾವ್ಯಾ ಮಾತನಾಡುತ್ತಿಲ್ಲ ಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡ ಸಂಬಂಧಿಕರು ಬಂದು ನೋಡಿದಾಗ ಕಾವ್ಯಾ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿದ್ದಳು. ಇದಾದ ಬಳಿಕ ಪತಿ ಮನು ಅಲ್ಲಿಂದ ಪರಾರಿಯಾಗಿದ್ದ.

ಅಸ್ವಸ್ಥಗೊಂಡ ಕಾವ್ಯಾಳನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕೊನೆಯುಸಿರೆಳೆದಿದ್ದಳು. ಇದರಿಂದ ಕಾವ್ಯಾಳ ಕುಟುಂಬಸ್ಥರು ಮನು ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾವ್ಯಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಮನುಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!