ಜೀವಾವಧಿ ಶಿಕ್ಷೆಗೆ ಗುರಿಯಾದ ಹಿನ್ನೆಲೆ: ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹ
ಧಾರವಾಡ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆಯನ್ವಯ ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹರಾಗಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನ ಪ್ರತಿ ಬಂದ ಕೂಡಲೇ ವಿಧಾನಸಭೆಯ ಕಾರ್ಯದರ್ಶಿ ನಿಯಮದಂತೆ ಶಾಸಕರ ಅನರ್ಹತೆ ಕುರಿತು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
ಧಾರವಾಡ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿನಯ್ ಕುಲಕರ್ಣಿ, ಒಮ್ಮೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಜನಪ್ರತಿನಿಧಿಗಳ ಕಾಯ್ದೆ-1951, ಸೆಕ್ಷನ್ 8(3)ರಂತೆ ಅಪರಾಧ ಪ್ರಕರಣದಲ್ಲಿ ಯಾವುದೇ ಜನಪ್ರತಿನಿಧಿಗಳು ಕನಿಷ್ಠ 2 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾದರೆ ಅವರು ಶಾಸಕ ಸ್ಥಾನದಿಂದ ಅನರ್ಹರಾಗಲಿದ್ದಾರೆ. ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಾಯ್ದೆಯಂತೆ ಈ ಅನರ್ಹತೆಯು ಶಿಕ್ಷೆಯ ಅವಧಿ ಮುಕ್ತಾಯದ ವರೆಗೆ ಮತ್ತು ಶಿಕ್ಷೆ ಅವಧಿ ಮುಗಿದ ಬಳಿಕ ಆರು ವರ್ಷಗಳ ವರೆಗೆ ಮುಂದುವರಿಯಲಿದೆ.
ಅಲ್ಲಿಯ ವರೆಗೆ ವಿನಯ್ ಕುಲಕರ್ಣಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ವಿನಯ್ ಕುಲಕರ್ಣಿ ಈ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಒಂದು ವೇಳೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ವಿನಯ್ ಕುಲಕರ್ಣಿ ಅನರ್ಹತೆ ರದ್ದಾಗಲಿದೆ.




