ಮೂಡಿಗೆರೆ: ಪತಿಯ ಶವದೊಂದಿಗೇ 10 ದಿನ ಕಳೆದ ಪತ್ನಿ: ಮಕ್ಕಳಿದ್ದೂ ಅನಾಥರಾದ ಪೋಷಕರು
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಪತಿ ಮೃತಪಟ್ಟು 10 ದಿನಗಳ ಕಾಲ ಕಳೆದಿದ್ದರು ಶವದ ಪಕ್ಕದಲ್ಲೇ ಪತ್ನಿ ಕಾಲ ಕಳೆದ ಘಟನೆ ನಡೆದಿದೆ.
77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಆದರೆ, ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಪತಿ ಸಾವನ್ನಪ್ಪಿರುವುದು ಅವರಿಗೆ ತಿಳಿದಿರಲೇ ಇಲ್ಲ. ಸುಮಾರು 10 ದಿನಗಳ ಕಾಲ ಅವರು ಕೊಳೆತು ಹುಳ ಹಿಡಿದಿದ್ದ ಪತಿಯ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ.
ಮನೆಯಿಂದ ವಿಪರೀತ ದುರ್ವಾಸನೆ ಬಂದಾಗ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಪತ್ನಿ “ನನ್ನ ಗಂಡ ನನಗೆ ಬೇಕು, ಯಾರೂ ಮುಟ್ಟಬೇಡಿ” ಎಂದು ಶವವನ್ನು ಮುಟ್ಟಲು ಬಿಡದೆ ಹಠ ಹಿಡಿದಿದ್ದರು. ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ಕರೆ ಮಾಡಿದಾಗಲೂ ತಾಯಿ “ಅಪ್ಪ ಚೆನ್ನಾಗಿದ್ದಾರೆ” ಎಂದೇ ಹೇಳುತ್ತಿದ್ದರು. ಅಪ್ಪ ಸತ್ತ 10 ದಿನಗಳ ನಂತರ ಮಗ ಬಂದರೂ, ತಂದೆಯ ಮುಖ ನೋಡುವ ಭಾಗ್ಯ ಆತನಿಗೆ ಸಿಗಲಿಲ್ಲ. ಇನ್ನು ಮಗಳು ಅಪ್ಪ ಸತ್ತರೂ ಬಂದು ನೋಡಿಲ್ಲ.
ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸ್ಥಳೀಯರು ಮುಟ್ಟಲು ಹಿಂಜರಿದರು. ಈ ವೇಳೆ ಸಮಾಜ ಸೇವಕ ಆರೀಫ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾದರು. ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಸಂಜೆ ವೇಳೆಗೆ ಮೋನಿಸ್ ಅವರ ಅಂತ್ಯಸಂಸ್ಕಾರ ನೆರವೇರಿತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




