ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಕೊಲೆ ಶಂಕೆ
ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯ ಬಳಿಯ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ನಾಸೀರ್ ಯಾನೆ ‘ದಕ್ಕೆ ನಾಸೀರ್’ ಎಂದು ಗುರುತಿಸಲಾಗಿದೆ. ನಾಸೀರ್ ವಿರುದ್ಧ ಹಲವಾರು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.
ಮೃತನ ಹಣೆ ಹಾಗೂ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿರುವುದರಿಂದ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ದಕ್ಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದಲ್ಲಿರುವ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಮಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ನಡೆದ ಎರಡನೇ ಕೊಲೆ ಪ್ರಕರಣವಾಗಿದೆ.




