April 7, 2026

4 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ತಂದೆ

0
image_editor_output_image-729264868-1775549249761.jpg

ತೆಲಂಗಾಣ: ಗಂಡು ಮಗು ಬೇಕೆಂಬ ಹಠ ಮತ್ತು ಹೆಣ್ಣು ಮಕ್ಕಳು ಜನಿಸಿದವು ಎಂಬ ದ್ವೇಷಕ್ಕೆ ಅಪ್ಪನೇ ತನ್ನಿಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಭೀಕರ ಘಟನೆ ತೆಲಂಗಾಣದ ಕರೀಮನಗರ ಜಿಲ್ಲೆಯಲ್ಲಿ ನಡೆದಿದೆ.

ಕರೀಮನಗರ ಗ್ರಾಮೀಣ ಭಾಗದ ಜುಬಿಲಿ ನಗರದ ನಿವಾಸಿ ಕಚು ಶ್ರೀಶೈಲಂ ಎಂಬಾತನೇ ತನ್ನ ನಾಲ್ಕು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಬಲಿತೆಗೆದುಕೊಂಡ ಆರೋಪಿ.

ಆರೋಪಿ ಶ್ರೀಶೈಲಂ ಆರು ವರ್ಷಗಳ ಹಿಂದೆ ಮೌನಿಕಾ ಎಂಬುವವರನ್ನು ಮದುವೆಯಾಗಿದ್ದನು. ಇವರಿಗೆ ನಾಲ್ಕು ವರ್ಷಗಳ ಹಿಂದೆ ಗೀತಾಂಶ ಮತ್ತು ಗೀತನ್ವಿಕ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ಆದರೆ, ಗಂಡು ಮಗು ಬೇಕೆಂದು ಆಶಿಸಿದ್ದ ಶ್ರೀಶೈಲಂಗೆ ಹೆಣ್ಣು ಮಕ್ಕಳು ಹುಟ್ಟಿದ್ದು ಸುತಾರಾಂ ಇಷ್ಟವಿರಲಿಲ್ಲ. ಇದೇ ವಿಷಯವಾಗಿ ಆತ ಪದೇ ಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು.

ಶುಕ್ರವಾರ ಸಂಜೆ ಕೂಡ ಕುಟುಂಬದಲ್ಲಿ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಶ್ರೀಶೈಲಂ ಇಬ್ಬರು ಮಕ್ಕಳನ್ನು ಗ್ರಾಮದ ಹೊರವಲಯದ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಮಕ್ಕಳನ್ನು ಸಮೀಪದ ಬಾವಿಗೆ ಎಸೆದು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಈಜುಗಾರರ ತಂಡ ತೀವ್ರ ಶೋಧ ನಡೆಸಿತು.

ಮೊದಲಿಗೆ ಗೀತಾಂಶ ಎಂಬ ಮಗುವಿನ ಶವ ಪತ್ತೆಯಾಗಿದ್ದು, ಹಲವು ಗಂಟೆಗಳ ನಂತರ ಗೀತನ್ವಿಕ ಎಂಬ ಇನ್ನೊಂದು ಮಗುವಿನ ಮೃತದೇಹವನ್ನೂ ಹೊರತೆಗೆಯಲಾಗಿದೆ. ಕೃತ್ಯದ ಬಳಿಕ ವಿಷಯ ತಿಳಿದ ಗ್ರಾಮಸ್ಥರು ಆರೋಪಿ ಶ್ರೀಶೈಲಂ ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮಕ್ಕಳನ್ನು ಬಾವಿಗೆ ಎಸೆಯುವ ಮುನ್ನ ಅವರಿಗೆ ವಿಷ ನೀಡಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶವಪರೀಕ್ಷೆಯ ನಂತರವಷ್ಟೇ ಸತ್ಯಾಂಶ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಎಸಿಪಿ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!