ಪತ್ನಿ ಅನಾರೋಗ್ಯದಿಂದ ಸಾವು: ನಿಧನದ ಸುದ್ದಿ ಕೇಳಿ ಮನೆಗೆ ಬರುತ್ತಿದ್ದ ಪತಿ ಅಪಘಾತದಲ್ಲಿ ಮೃತ್ಯು
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಪತ್ನಿ ಅನಾರೋಗ್ಯದಿಂದ ಮೃತಪಟ್ಟರೆ, ಆಕೆಯ ನಿಧನದ ಸುದ್ದಿ ಕೇಳಿ ಆಘಾತದಲ್ಲಿ ಧಾವಿಸಿ ಬಂದ ಪತಿ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಈ ಘಟನೆಯಿಂದಾಗಿ ಮೂವರು ಪುಟ್ಟ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಅರವಳ್ಳಿ ಗ್ರಾಮದ ನಿವಾಸಿ ಮಧುರಾ ಕರೆಪ್ಪ ಮಾದರ (30) ಕಳೆದ ಹಲವಾರು ವರ್ಷಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹತ್ತಾರು ಚಿಕಿತ್ಸೆ ಪಡೆದರೂ ನೋವು ವಾಸಿಯಾಗಿರಲಿಲ್ಲ.
ಭಾನುವಾರ ಹೊಟ್ಟೆನೋವು ಅಸಹನೀಯವಾದಾಗ, ಜೀವನದಲ್ಲಿ ಜಿಗುಪ್ಸೆಗೊಂಡ ಮಧುರಾ ಕ್ರಿಮಿನಾಶಕ ಸೇವಿಸಿದ್ದರು. ತಕ್ಷಣವೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಪತ್ನಿ ಮೃತಪಟ್ಟ ಸುದ್ದಿ ತಿಳಿದ ಪತಿ ಕರೆಪ್ಪ ಮಾಧರ (36) ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಆಘಾತ ಮತ್ತು ಅವಸರದಲ್ಲಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾಗ, ವಿಧಿಯಾಟ ಬೇರೆಯೇ ಇತ್ತು. ರಸ್ತೆ ದಾಟುವಾಗ ಅಥವಾ ಅವಸರದಲ್ಲಿ ಬರುವಾಗ ಆಕಸ್ಮಿಕವಾಗಿ ಬಸ್ ಚಕ್ರಕ್ಕೆ ಸಿಲುಕಿದ ಕರೆಪ್ಪ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಒಂದೇ ದಿನ ಮನೆಯ ಯಜಮಾನ ಮತ್ತು ಯಜಮಾನಿ ಇಬ್ಬರೂ ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕಸಾಗರ ಮೂಡಿಸಿದೆ.




