ಮಡಿಕೇರಿ: ಬೆಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದ ಕೇರಳದ ಯುವತಿ ನಾಪತ್ತೆ
ಮಡಿಕೇರಿ: ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದ ಪ್ರಸಿದ್ಧ ಪ್ರವಾಸಿ ತಾಣ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. (ಶರಣ್ಯ) ನಾಪತ್ತೆಯಾಗಿದ್ದಾರೆ. ಗುರುವಾರ ಸಂಜೆಯಿಂದ ಯುವತಿಯ ಸುಳಿವು ಸಿಗದಿರುವುದು ಆತಂಕ ಮೂಡಿಸಿದೆ.
ಘಟನೆಯ ವಿವರ: ಕೇರಳದಿಂದ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಶರಣ್ಯ, ಕಕ್ಕಬ್ಬೆಯ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಗುರುವಾರ ಬೆಳಿಗ್ಗೆ ಅವರು ಒಬ್ಬರೇ ಚಾರಣಕ್ಕೆ ಹೋಗಲು ಮುಂದಾಗಿದ್ದರು. ಆದರೆ, ಆ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವ ಕಾರಣ ಹೋಂಸ್ಟೇ ಸಿಬ್ಬಂದಿ ಅವರನ್ನು ಇತರ ಒಂಬತ್ತು ಪ್ರವಾಸಿಗರ ತಂಡದೊಂದಿಗೆ ಕಳುಹಿಸಿಕೊಟ್ಟಿದ್ದರು. ಚಾರಣದ ವೇಳೆ ನಾಯಿಗಳ ಜೊತೆ ಆಟವಾಡುತ್ತಾ ತಂಡಕ್ಕಿಂತ ಹಿಂದೆ ಉಳಿದ ಶರಣ್ಯ, ದಾರಿ ತಪ್ಪಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಶೋಧ ಕಾರ್ಯ ಚುರುಕು: ತಾನು ದಾರಿ ತಪ್ಪಿರುವುದಾಗಿ ಶರಣ್ಯ ಗುರುವಾರ ಸಂಜೆ ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ತಿಳಿಸಿದ್ದರು. ಅದಾದ ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ತಡರಾತ್ರಿ 3 ಗಂಟೆಯವರೆಗೂ ಕಾಡಿನೊಳಗೆ ಹುಡುಕಾಟ ನಡೆಸಿದರೂ ಯುವತಿಯ ಪತ್ತೆಯಾಗಿಲ್ಲ. ಸದ್ಯ ಕಾಡಾನೆಗಳ ಭೀತಿಯ ನಡುವೆಯೇ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ಮುಂದುವರಿಸಿದೆ.




