ಬಂಟ್ವಾಳ: 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎಂಟು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಪಾಲಕ್ಕಾಡ್ ನಿವಾಸಿ ಶಕೀಲ್ ಪಿ (43) ಎಂದು ಗುರುತಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈತ ಕಳೆದ ಸುಮಾರು ಒಂದು ದಶಕದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದನು.
ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳಾದ ಸಂತೋಷ್ ಮತ್ತು ಶಿವಾನಂದ ಮಡ್ಡಿ ಅವರು ಕೇರಳದ ತಿರೂರ್‌ನಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ, ಮಾರ್ಚ್ 27ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಬಂಟ್ವಾಳಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




