15 ಲಕ್ಷಕ್ಕಿಂತ ಹೆಚ್ಚು ಲಂಚ ಪಡೆದರೆ ಮಾತ್ರ ಅದು ಭ್ರಷ್ಟಾಚಾರ:
ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ
ಭೋಪಾಲ್: ಗ್ರಾಮ ಪಂಚಾಯಿತಿ ಸದಸ್ಯ 15 ಲಕ್ಷ ರೂ. ಲಂಚ ಪಡೆಯುವುದು ಸಾಮಾನ್ಯ. ಅದನ್ನು ಭ್ರಷ್ಟಾಚಾರ ಎನ್ನಲಾಗದು ಎಂದು ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಾತ್ಮಕ ಹೇಳಿಕೆ ನೀಡಿದರು.
ಮಧ್ಯಪ್ರದೇಶದ ರೇವಾದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯ 15 ಲಕ್ಷ ರೂ.ಗಿಂತ ಅಧಿಕ ಹಣ ಪಡೆದಾಗ ಮಾತ್ರ ಅದು ಭ್ರಷ್ಟಾಚಾರವಾಗುತ್ತದೆ. ಆಗ ಮಾತ್ರ ದೂರು ನೀಡಲು ಬನ್ನಿ ಎಂದು ತಿಳಿಸಿದರು.
ಜನರು ಗ್ರಾಪಂ ಸದಸ್ಯ ಲಂಚ ಪಡೆಯುತ್ತಾನೆ ಎಂದು ದೂರು ನೀಡಲು ಬರುತ್ತಾರೆ. ಆದರೆ ಆತ ಚುನಾವಣೆಯಲ್ಲಿ ಗೆಲ್ಲಲು 7 ಲಕ್ಷ ರೂ. ಖರ್ಚು ಮಾಡುತ್ತಾನೆ. ಗೆದ್ದ ನಂತರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹಣದುಬ್ಬರ ಕಾರಣದಿಂದ ಇನ್ನೊಂದು ಲಕ್ಷ ರೂ. ಹೆಚ್ಚಿರುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದ ಕಾನ್ಪುರದ ಜಿಲ್ಲಾ ನ್ಯಾಯಾಲಯವು ತೆರಿಗೆ ವಂಚನೆ ಪ್ರಕರಣದಲ್ಲಿ ವ್ಯಾಪಾರಿ ಪಿಯೂಷ್ ಜೈನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದಾದ ಒಂದು ದಿನದ ನಂತರ ಸಂಸದರು ಈ ಹೇಳಿಕೆ ನೀಡಿದ್ದಾರೆ. ಜೈನ್ ಬಂಧನದ ಬಗ್ಗೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಮಾತಿನ ಸಮರ ನಡೆಯುತ್ತಿದೆ. ಎರಡೂ ಪಕ್ಷಗಳು ಜೈನ್ ಅವರೊಂದಿಗೆ ಸಂಪರ್ಕ ಹೊಂದಿವೆ ಎಂಬ ಆರೋಪವಿದೆ.