ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜ್ ವಿಚಾರ: ಶಾಸಕರ ಅಭಿವೃಧಿ ಕಾರ್ಯಗಳನ್ನು ಸಹಿಸಲಾಗದ ವಿಘ್ನ ಸಂತೋಷಿಗಳಿಂದ ವಿರೋಧ: ವಿಟ್ಲ ಬ್ಲಾಕ್ ಕಾಂಗ್ರೆಸ್
ವಿಟ್ಲ: ಸೇಡಿಯಾಪಿನಲ್ಲಿ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ೩೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ೧೮೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮೂಲಸೌಕರ್ಯಗಳ ದೃಷ್ಠಿಯಿಂದ ಸೇಡಿಯಾಪಿನ ಜಾಗ ಹೆಚ್ಚು ಸೂಕ್ತವಾಗಿದೆ. ಗ್ರಾಮೀಣ ಜನರಿಗೆ ಹೆಚ್ಚಿನ ಅವಕಾಶಗಳಾಗುತ್ತದೆ. ೪ ಕಡೆಯಿಂದ ಸಂಪರ್ಕ ರಸ್ತೆಗಳಾಗಲಿದ್ದು, ಸಂಪರ್ಕ ವ್ಯವಸ್ಥೆಯೂ ಸುಲಭವಾಗಲಿದೆ. ಶಾಸಕರ ಅಭಿವೃಧಿ ಕಾರ್ಯಗಳನ್ನು ಸಹಿಸಲಾಗದ ವಿಘ್ನ ಸಂತೋಷಿಗಳು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇರುವ ಆಸ್ಪತ್ರೆಯ ಬಳಿಯಲ್ಲಿ ೩೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಅಸಾಧ್ಯ ಎಂಬುದನ್ನು ಹಿಂದಿನ ಶಾಸಕರ ಅವಧಿಯಲ್ಲೇ ಆರೋಗ್ಯ ಇಲಾಖೆ ವರದಿಯನ್ನು ನೀಡಿತ್ತು. ಮೆಡಿಕಲ್ ಕಾಲೇಜಿಗೆ ೪೦ ಎಕ್ರೆ ಮೀಸಲು ಇಡುವ ವ್ಯವಸ್ಥೆಯನ್ನು ಶಾಸಕಿಯಾಗಿದ್ದ ಶಕುಂತಳಾ ಟಿ ಶೆಟ್ಟಿ ಅವಧಿಯಲ್ಲಿ ಮಾಡಲಾಗಿದ್ದು, ಈಗ ಶಾಸಕರು ಅದಕ್ಕೆ ಬೇಕಾದ ಅನುದಾನಗಳನ್ನು ಅವಿರತ ಶ್ರಮದ ಮೂಲಕ ತರಿಸಿದ್ದಾರೆ. ಸೇಡಿಯಾಪಿನಲ್ಲಿ ಆಯುಷ್ ಆಯುರ್ವೇದ ಕಾಲೇಜು ಸ್ಥಾಪನೆಗೂ ಅಗತ್ಯ ವ್ಯವಸ್ಥೆಯನ್ನು ಶಾಸಕರು ಮಾಡಿದ್ದಾರೆ. ಈಗ ಕೈಯಲ್ಲಾಗದವರು ಮೈ ಎಲ್ಲಾ ಪರಚಿಕೊಂಡರೆಂಬಂತೆ ವರ್ತಿಸಿ, ಯೋಜನೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ತಿಳಿಸಿದರು.
ಹಿರಿಯ ಮುಖಂಡ ಎಂ. ಎಸ್. ಮಹಮ್ಮದ್ ಮಾತನಾಡಿ ಕಾಮಗಾರಿಗೆ ಪ್ರಸ್ತಾವನೆಗಳನ್ನು ಕಳುಹಿಸಿದರೆ, ಅದನ್ನು ಸಂಬಂಧಪಟ್ಟ ಅಧಿಕಾರಿಗಳ, ಇಲಾಖೆಯ ಮೂಲಕ ಅನುದಾನ ತರಿಸುವ ಕಾರ್ಯ ನಡೆಯಬೇಕು. ಅದನ್ನು ಶಾಸಕ ಅಶೋಕ್ ಕುಮಾರ್ ರೈ ಸರಿಯಾಗಿ ಮಾಡುತ್ತಿದ್ದಾರೆ. ಅಭಿವೃದ್ಧಿಯ ಮನಸ್ಸು ಇಲ್ಲದಿದ್ದರೆ ಬಾಯಿ ಮುಚ್ಚಿ ಕೂರುವ ಕೆಲಸವಾದರೂ ಮಾಡಬೇಕು ಎಂದರು.
ಪ್ರಮುಖರಾದ ರಮಾನಾಥ ವಿಟ್ಲ, ಪ್ರವೀಣ್ ಚಂದ್ರ ಆಳ್ವ, ವಿಟ್ಲ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಹಂಝ ವಿಕೆಎಂ ವಿಟ್ಲ ಉಪಸ್ಥಿತರಿದ್ದರು.




