ಮಂಗಳೂರು: ಕೆಲಸ ಮಾಡುವಾಗ ಕಟ್ಟಡದಿಂದ ಬಿದ್ದು ಯುವಕ ಮೃತ್ಯು
ಮಂಗಳೂರು: ಬೆಂಗಳೂರಿನಲ್ಲಿ ಎಸಿ ಅಳವಡಿಸುತ್ತಿದ್ದ ಸಂದರ್ಭದಲ್ಲಿ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಲಪಾಡಿ ಮೂಲದ 32 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ.
ಮೃತರನ್ನು ತಲಪಾಡಿ ನಿವಾಸಿಗಳಾದ ವಿಶ್ವನಾಥ್ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಹರ್ಷಿತ್ ಪೂಜಾರಿ ಎಂದು ಗುರುತಿಸಲಾಗಿದೆ.
ಹರ್ಷಿತ್ ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ಹಡಗು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ಮೂರು ತಿಂಗಳಿಗೊಮ್ಮೆ ರಜೆಯ ಮೇಲೆ ಮನೆಗೆ ಬರುತ್ತಿದ್ದ ಅವರು, ಆ ಬಿಡುವಿನ ವೇಳೆಯಲ್ಲಿ ತಮ್ಮ ಮೂಲ ವೃತ್ತಿಯಾದ ಎಸಿ ಮೆಕ್ಯಾನಿಕ್ ಕೆಲಸವನ್ನೂ ಮಾಡುತ್ತಿದ್ದರು. ಇತ್ತೀಚೆಗೆ ಸಂಬಂಧಿಕರೊಬ್ಬರಿಗೆ ಎಸಿ ಮೆಕ್ಯಾನಿಸಂ ತರಬೇತಿ ನೀಡಲು ಅವರು ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿನ ಬಹುಮಹಡಿ ಕಟ್ಟಡವೊಂದರಲ್ಲಿ ಎಸಿ ಯುನಿಟ್ ಅಳವಡಿಸುತ್ತಿದ್ದಾಗ, ಹರ್ಷಿತ್ ಆಕಸ್ಮಿಕವಾಗಿ ಸಮತೋಲನ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 7 ರಂದು ಅವರನ್ನು ಬೆಂಗಳೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಮಂಗಳೂರಿಗೆ ತಲುಪುವ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮೃತರ ಅಂತ್ಯಕ್ರಿಯೆಯು ಸೋಮವಾರ ನಡೆದಿದೆ. ಹರ್ಷಿತ್ ಅವರು ಪೋಷಕರು, ಪತ್ನಿ, ಓರ್ವ ಸಹೋದರ ಮತ್ತು ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.




