ಪಣಂಬೂರು: ಬೈಕ್ ಗೆ ಢಿಕ್ಕಿ ಲಾರಿ: ಬೈಕ್ ಸವಾರ ಸ್ಥಳದಲ್ಲೆ ಸಾವು
ಪಣಂಬೂರು: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿದ ಘಟನೆ ಫೆಬ್ರವರಿ 26 ರ ಸಂಜೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮುಂಭಾಗ ನಡೆದಿದೆ.
ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ನಿವಾಸಿ ಸದ್ಯ ಮಂಗಳೂರು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಗುರುತಿಸಲಾಗಿದೆ.
ಶಿವದಾಸ್ ಗಣಪತಿ ನಾಯ್ಕ ಅವರು ಬೈಕಂಪಾಡಿಯ ಔಷಧಿ ತಯಾರಕ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿಕೊಂಡು ಬಿಜೈಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಅವರು ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಎಂ. ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.




