ಮಂಗಳೂರು: ಕಾಲೇಜ್ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ: ತಂದೆ ಮತ್ತು ಮಗ ಅರೆಸ್ಟ್
ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿ ಕುಳಿತು ಟೈಂಪಾಸ್ ಮಾಡುತ್ತಿದ್ದ ಸ್ಥಳಕ್ಕೆ ಬಂದ ಇಬ್ಬರು ವಿಚಾರಣೆ ನಡೆಸಿ ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆಗೈದು ಹಲ್ಲೆ ನಡೆಸಿ ವೀಡಿಯೋ ಮಾಡಿದ್ದಲ್ಲದೇ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ.
ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನಂತೆ ಅತ್ತಾವರ ನಿವಾಸಿ ಸಂತೋಷ್ @ಸ್ಟೀವನ್ ಮೊಂತೆರೋ ಮತ್ತು ಆತನ ಮಗ ಅನಿಲ್ ಮೊಂತೆರೋ ನ ಬಂಧಿಸಿದ್ದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ-ಬಾಲಕಿ ಕುಳಿತಲ್ಲಿಗೆ ಮೊಬೈಲ್ ಜೊತೆ ವೀಡಿಯೋ ಮಾಡುತ್ತಾ ಬಂದ ಸ್ಟೀವನ್ ಮತ್ತು ಆತನ ಮಗ ಅನಿಲ್ ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಜೊತೆಯಲ್ಲಿದ್ದ ಬಾಲಕನ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಾ ಹಲ್ಲೆ ನಡೆಸಿ ಮಹಾ ಸಂಸ್ಕಾರವಂತನಂತೆ ವರ್ತಿಸಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಈತನ ದುಷ್ಕೃತ್ಯದ ವೀಡಿಯೋ ಸಾಕಷ್ಟು ಹರಿದಾಡುತ್ತಿದೆ.
ಈ ಬಗ್ಗೆ ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ತಂದೆ ಮತ್ತು ಮಗನ ವಿರುದ್ಧ ಅ ಕ್ರ: 126(2), 115(2), 352, 351(1), 79, SC & ST Act1989ರಂತೆ ಅ ಕ್ರ: 3(1), (r)(s)BNS 2023ರಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಸಂತೋಷ್ @ಸ್ಟೀವನ್ ಮೊಂತೆರೋ ಪುತ್ತೂರು ಹೊರವಲಯದಲ್ಲಿ ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯೆಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.




