ಬೆಳ್ತಂಗಡಿ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು
ಬೆಳ್ತಂಗಡಿ: 2012ರಲ್ಲಿ ಕುತ್ತೂರು ಬಳಿ ನಕ್ಸಲ್ ಚಳುವಳಿಗೆ ಸಂಬಂಧಿಸಿದಂತೆ ಕರಪತ್ರ ಹಂಚ್ಚಿದ ಪ್ರಕರಣಕ್ಕೆ ಸಂಬಂದಿಸಿದಂತೆ ನಕ್ಸಲ್ ಮಹೇಶ್ ಯಾನೆ ಜಯಣ್ಣ ಅಲಿಯಾಸ್ ಜಾನ್ (49) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು.
ಕೇರಳ ರಾಜ್ಯದ ತ್ರಿಶೂರ್ ಜೈಲಿನಲ್ಲಿದ್ದ ಮಹೇಶ್ ನನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಗುರುವಾರ ಬೆಳ್ತಂಗಡಿಗೆ ಕರೆತಂದರು. ಆರೋಪಿ ಮಹೇಶ್ ರಾಯಚೂರು ಜಿಲ್ಲೆಯ ನಿವಾಸಿ. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪ ಎದುರಿಸುತ್ತಿರುವ ಆತನಿಗೆ ಜಯಣ್ಣ, ಜಾನ್, ಮಾರಪ್ಪ ಎಂಬ ಹೆಸರುಗಳೂ ಇವೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶ ಹೊರಡಿಸಿದ ಕಾರಣ ಆತನನ್ನು ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ. ಆತ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದ. ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಶರಣಾಗಿದ್ದ.




