ಉಡುಪಿ: ಮರಕ್ಕೆ ಢಿಕ್ಕಿ ಹೊಡೆದ ಟಿಪ್ಪರ್ ಲಾರಿ: ಚಾಲಕ ಸ್ಥಳದಲ್ಲೇ ಸಾವು
ಉಡುಪಿ: ರಸ್ತೆಯಲ್ಲಿನ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿದ ಟಿಪ್ಪರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಡಿ.10ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ಸಂಭವಿಸಿದೆ.ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ಈ ವಾಹನವು ನಿಟ್ಟೂರಿನ ರಂಜನ್ ಶೆಟ್ಟಿ ಅವರಿಗೆ ಸೇರಿದ್ದು, ಜಲ್ಲಿ ಲೋಡ್ ಮಾಡಲು ಶ್ರೀಕಾಂತ್ ಅವರು ನಿಟ್ಟೂರಿನಿಂದ ಹೊರಟಿದ್ದರು.ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಟಿಪ್ಪರ್ ಸಂಚರಿಸುತ್ತಿದ್ದಾಗ, ರಸ್ತೆಯ ತಿರುವಿನಲ್ಲಿ ಇದ್ದ ಗುಂಡಿಗೆ ಬಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಇದರಿಂದ ವಾಹನವು ರಸ್ತೆಯ ಬಲ ಬದಿಯ ದೊಡ್ಡ ಮರಕ್ಕೆ ಢಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕನ ಆಸನದಲ್ಲಿ ಸಿಲುಕಿದ್ದ ಶ್ರೀಕಾಂತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





