ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಢಿಕ್ಕಿ: ಪಾದಚಾರಿ ಮೃತ್ಯು
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಉರುಳಿ ಪಾದಚಾರಿ ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಬಂಟ್ವಾಳದ ಅಜ್ಜಿಬೆಟ್ಟು ಗ್ರಾಮದ ದೇರೊಟ್ಟು ಎಂಬಲ್ಲಿ ನಡೆದಿದೆ.
ಗೋಪಾಲ ಶೆಟ್ಟಿಗಾರ್ (60) ಮೃತಪಟ್ಟ ವ್ಯಕ್ತಿ. ದೇರೊಟ್ಟು ಎಂಬಲ್ಲಿ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಚಡವಿನಲ್ಲಿ ವಾಹನವು ಹಿಂದಕ್ಕೆ ಚಲಿಸಿದಾಗ ವಾಹನವನ್ನು ಬ್ರೇಕ್ ಹಾಕಿ ನಿಯಂತ್ರಿಸಲಾಗದೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪಿಕಪ್ ವಾಹನ ಹಿಂದಕ್ಕೆ ಚಲಿಸಿದಾಗ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಗೋಪಾಲ್ ಶೆಟ್ಟಿಗಾರ್ ಮೇಲೆ ಮಗುಚಿ ಬಿದ್ದಿದೆ. ವಾಹನದ ಅಡಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡ ಗೋಪಾಲ ಶೆಟ್ಟಿಗಾರ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.




