ಪಂಚಾಯತ್ ರಾಜ್ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ ಗಧಾಪ್ರಹಾರ ಹಾಗೂ ತಕ್ಷಣ ಸರಿಪಡಿಸುವಂತೆ ಸುಭಾಶ್ಚಂದ್ರ ಶೆಟ್ಟಿ ಆಗ್ರಹ
ಬಂಟ್ವಾಳ: ರಾಷ್ಟ್ರಪಿತ ಮಹಾತ್ಮ ಗಾಂಧಿಜೀವರ ಕನಸಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಿರ್ಜೀವಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಅತ್ಯಂತ ಖಂಡನೀಯವೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಷ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ.
2020–25 ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜನಪ್ರತಿನಿಧಿಗಳು “ಪ್ರತಿ ಪಂಚಾಯತಿಗೂ ಕನಿಷ್ಠ ಒಂದು ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೇರವಾಗಿ ಬಿಡುಗಡೆ ಮಾಡಲಿದೆ” ಎಂಬ ಭರವಸೆಯನ್ನು ನೀಡಿದ್ದರು. ಆದರೆ ವಾಸ್ತವದಲ್ಲಿ, ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ದೊರೆಯುತ್ತಿದ್ದ ಹಣಕಾಸು ಯೋಜನೆಗಳ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಕಡಿತಗೊಳಿಸುತ್ತಾ ಬಂದು, ಪ್ರಸ್ತುತ 2025–26ರ 15ನೇ ಹಣಕಾಸು ಆಯೋಗದ ಯೋಜನೆಗಳಿಗೂ ಪಂಚಾಯತಿಗಳು ಕ್ರೀಯಾಯೋಜನೆ ಮಾಡಿ ಅವಧಿ ಮುಗಿಯುತ್ತಿದ್ದರೂ, ಇಂದಿನ ಕೇಂದ್ರ ಸರ್ಕಾರ ಒಂದು ನಯಾ ಪೈಸೆಯನ್ನೂ ಈವರೆಗೆ ಬಿಡುಗಡೆ ಮಾಡದಿರುವುದು ಗಂಭೀರ ವಿಷಯ ನಿರ್ಲಕ್ಷ್ಯತೆ ಎಂದು ಅವರು ಆರೋಪಿಸಿದ್ದಾರೆ.
ಅದರ ಜೊತೆಗೆ, ಬಡವರಿಗೆ ಉದ್ಯೋಗ, ಆರ್ಥಿಕ ಭದ್ರತೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಹೊಸ ನಿಯಮಗಳ ಮೂಲಕ ಬಿಗಿಗೊಳಿಸಿ, ಅನುಷ್ಠಾನವೇ ಸಾಧ್ಯವಾಗದಂತೆ ಮಾಡುತ್ತಿದೆ. ಅನುದಾನಗಳನ್ನು ಕಡಿತಗೊಳಿಸುತ್ತಾ ಬಂದಿರುವುದಕ್ಕೆ ಹೆಚ್ಚಾಗಿ, ಇತ್ತೀಚೆಗೆ ಪಂಚಾಯತ್ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದ್ದ ಸಾಮಗ್ರಿ ಮೊತ್ತವನ್ನು ಈಗ ತಾಲೂಕು ಖಜಾನೆಯ ಮೂಲಕ ಬಿಡುಗಡೆಗೊಳಿಸುವಂತೆ ಆದೇಶಿಸಿರುವುದು ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ವಿಕೇಂದ್ರೀಕರಣಕ್ಕೆ ಕೊಡಲಿಯೇಟು ಇಟ್ಟಂತಾಗಿದೆ.
ಕೇಂದ್ರ ಸರ್ಕಾರದ ಈ ನಿಲುವು ಗಮನಿಸಿದಾಗ ಕೇಂದ್ರೀಕರಣದ ಆಡಳಿತದತ್ತ ದೇಶ ಸಾಗುತ್ತಿರುವುದು ಸ್ಪಷ್ಟ ಎಂದು ಶ್ರೀ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಲೋಪದೋಷಗಳನ್ನು ಲೋಕಸಭಾ ಸದಸ್ಯರು ಮತ್ತು ರಾಜ್ಯ ಸರಕಾರ ತಕ್ಷಣ ಗಮನಿಸಿ ಸರಿಪಡಿಸಲು ಮುನ್ನಡೆಯಬೇಕೆಂದು ಸಂಘಟನೆ ಆಗ್ರಹಿಸುತ್ತದೆ.
ಮುಂದಿನ ದಿನಗಳಲ್ಲಿ ಇದೇ ರೀತಿಯ ಕ್ರಮಗಳು ಮುಂದುವರಿದರೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಮುಂದಾಗುವುದಾಗಿ ಅವರು ಎಚ್ಚರಿಸಿದ್ದಾರೆ.





