December 16, 2025

ಸಾಲದ ಸುಳಿಗೆ ಸಿಲುಕಿ ಮಗಳು, ಮೊಮ್ಮಗ ಆತ್ಮಹತ್ಯೆ: ಸಾವು ಕಣ್ಣಾರೆ ಕಂಡ ಅಜ್ಜಿ ಹೃದಯಾಘಾತದಿಂದ ಮೃತ್ಯು

0
image_editor_output_image-1849277606-1765269758943.jpg

ಬೆಂಗಳೂರು: ಸಾಲದ ಸುಳಿಗೆ ಸಿಲುಕಿ ಮಗಳು, ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡ ಅಜ್ಜಿ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಕೋರಮಂಗಲ ಬಳಿಯ ತಾವರೆಕೆರೆ ಎರಡನೇ ರಸ್ತೆಯಲ್ಲಿ ನಡೆದಿದೆ.

ಮೂಲತಃ ತಮಿಳುನಾಡಿನ ಧರ್ಮಪುರಿ ಕಡೆಯವರಾದ ಸುಧಾ (38), ಮಗ ಮೋನಿಷ್ (14) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಜ್ಜಿ ಮುದ್ದಮ್ಮ(68) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೃತ ಸುಧಾ ಬಿರಿಯಾನಿ ಸೆಂಟರ್, ಚಿಪ್ಸ್‌ ಶಾಪ್‌ ಹಾಗೂ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಮೋನಿಷ್ 7ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ಮುದ್ದಮ್ಮನ ಮಗಳು ಸುಧಾ, ಸುಧಾಳ ಮಗ ಮೋನಿಷ್. ಮೃತ ಸುಧಾ ಬಿರಿಯಾನಿ ಸೆಂಟರ್, ಚಿಪ್ಸ್ಶಾಪ್ ಹಾಗೂ ಮಿಲ್ಕ್ ಪಾರ್ಲರ್ ನಡೆಸಿ, ಅಪಾರ ನಷ್ಟಕ್ಕೆ ಸಿಲುಕಿದ್ದರು. ಇದರಿಂದ ಮೈತುಂಬ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬಿರಿಯಾನಿ ಹಾಗೂ ಚಿಪ್ಸ್ ಸೆಂಟರ್‌ನ್ನು ಬೇರೆಯವರಿಗೆ ಕೊಟ್ಟಿದ್ದರು. ಅಂಗಡಿ ಪಡೆದವನು ಮೂರು ತಿಂಗಳಾದರೂ ಕೂಡ ಹಣ ಕೊಟ್ಟಿರಲಿಲ್ಲ.

ಇತ್ತ ಧರ್ಮಪುರಿಯಿಂದ ಸಾಲ ಪಡೆದಿದ್ದ ಸುಧಾಗೆ ಸಾಲದ ಕಾಟ ಶುರುವಾಗಿತ್ತಂತೆ. ಭಾನುವಾರ (ಡಿ.7) ಧರ್ಮಪುರಿಯ ದೇಗುಲಕ್ಕೆ ಮೂವರು ಒಟ್ಟಿಗೆ ಹೋಗಿ ಬಂದಿದ್ದರು. ಆದರೆ ಸೋಮವಾರ (ಡಿ.8) ಬೆಳಿಗ್ಗೆ ನೋಡಿದರೆ ಮಗನಿಗೆ ವಿಷವಿಟ್ಟು ಸುಧಾ ಜೀವ ಬಿಟ್ಟಿದ್ದಾರೆ.

ಮಗಳು-ಮೊಮ್ಮಗನ ನರಳಾಟ ನೋಡಿದ್ದ ತಾಯಿ ಮೊದಲ ಮಗಳಿಗೆ ವಿಷಯ ತಿಳಿಸಿದ್ದರು. ಮೊದಲ ಮಗಳು ಬೊಮ್ಮಸಂದ್ರದಿಂದ ಬರುವಷ್ಟರಲ್ಲಿ ತಾಯಿ ಮಾದಮ್ಮ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ವಿಪರೀತ ಸಾಲದ ಹೊರೆ ಮತ್ತು ಹಣಕಾಸಿನ ತೊಂದರೆಗಳಿಂದ ಮನನೊಂದು ಸುಧಾ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನೂ ಸೇಂಟ್‌ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!