ಮಾಣಿ: ಬಾಲವಿಕಾಸದ ಕೃತಿ ಎನ್ ಪಿ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ವಿಟ್ಲ: ಪೆರಾಜೆ- ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಿಸೆಂಬರ್ 03 ರಿಂದ 06 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರಗಿದ ರಾಜ್ಯಮಟ್ಟದ 17 ರ ವಯೋಮಾನದ ಹುಡುಗಿಯರ ಚಕ್ರ ಎಸೆತ ಸ್ಪರ್ಧೆಯಲ್ಲಿ ಮಾಣಿ- ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕೃತಿ ಎನ್ ಪಿ ಪ್ರಥಮ ಸ್ಥಾನ ಪಡೆದು ಡಿಸೆಂಬರ್ 13 ರಿಂದ 15 ರವರೆಗೆ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾಳೆ.
ಕಲ್ಲಡ್ಕ ನೆಟ್ಲಾದ ನಿವಾಸಿಗಳಾದ ದಿನೇಶ್ ಬಿ ಮತ್ತು ತೇಜಾಕ್ಷಿ ದಂಪತಿಗಳ ಪುತ್ರಿಯಾಗಿರುವ ಕೃತಿಗೆ ಬಾಲವಿಕಾಸ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ದಿನಕರ್ ಪೂಜಾರಿ ಮತ್ತು ಸೌಮ್ಯ ಎಸ್ ಹಾಗೂ ಪೆರ್ಮನ್ನೂರು ಬಬ್ಬುಕಟ್ಟೆ ಪ್ರೌಢಶಾಲೆಯ ಗಣೇಶ್ ಕುಲಾಲ್ ಕೊಲ್ಯ ತರಬೇತಿ ನೀಡಿರುತ್ತಾರೆ. ಡಿಸೆಂಬರ್ 08 ರಂದು ಶಾಲೆಯಲ್ಲಿ ಸಾಧಕ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.





