November 25, 2024

ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ಕಗ್ಗೊಲೆಗೆ ಸಮ: ದಲಿತ ಹಕ್ಕುಗಳ ಸಮಿತಿ

0

ಬೆಳ್ತಂಗಡಿ: ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ. ಇದು ಸಂವಿಧಾನದ ಕಗ್ಗೊಲೆ ‌ಮಾತ್ರವಲ್ಲದೇ ಅತ್ಯಂತ ಅಮಾನವೀಯ ಕಾಯ್ದೆ ಎಂದು ದಲಿತ ಹಕ್ಕುಗಳ ಸಮಿತಿ ಬೆಳ್ತಂಗಡಿ ತಾಲೂಕು ಘಟಕ ಟೀಕಿಸಿದೆ‌.

ರಾಜ್ಯದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯಿದೆಯಲ್ಲಿ ಅಪ್ರಾಪ್ತರು , ಬುದ್ಧಿಮಾಂದ್ಯತೆ, ದಲಿತ ಸಮುದಾಯದವರು ಮತಾಂತರಗೊಂಡರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕ್ರಮ ಅತ್ಯಂತ ಅವಿವೇಕಿತನದ್ದು. ಇದರ ಪ್ರಕಾರ ದಲಿತರು ಬುದ್ಧಿಮಾಂದ್ಯರಿಗೆ ಸಮ ಎನ್ನುವ ಮೂಲಕ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಇದು ಮನುಸ್ಮೃತಿಯ ಮೂಲ ತತ್ವವನ್ನು ಆರೆಸ್ಸೆಸ್ಸಿ ನ ಅಜೆಂಡಾದಂತೆ ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಆರೋಪಿಸಿದ್ದಾರೆ.

ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ , ದಬ್ಬಾಳಿಕೆ , ದೌರ್ಜನ್ಯವನ್ನು ತೊಡೆದುಹಾಕಲು ಕಠಿಣ ಕಾಯ್ದೆ, ಕಾನೂನುಗಳನ್ನು ಜಾರಿಗೆ ತರುವ ಬದಲಾಗಿ ಹಿಂದೂ ಧರ್ಮದ ಅಸಮಾನತೆಯನ್ನು ವಿರೋಧಿಸಿ ಸಂವಿಧಾನ ಬದ್ದವಾಗಿ ಇನ್ನೊಂದು ಧರ್ಮವನ್ನು ಸ್ವೀಕರಿಸಿದರೆ ತಪ್ಪು ಹೇಗಾಗುತ್ತದೆ ? ದೇಶದಾದ್ಯಂತ ದತ್ತಪಂಥ ಸೇರಿದಂತೆ ಲಿಂಗಾಯತ ಧರ್ಮ ಏಕೆ ಸ್ಥಾಪಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಮೊದಲು ಅಧ್ಯಯನ ನಡೆಸಲಿ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ” ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ಧ ಧರ್ಮ ಸ್ವೀಕರಿಸಿದರು. ಒಬ್ಬ ವ್ಯಕ್ತಿ ತನ್ನ ಮತ, ಧರ್ಮವನ್ನು ತನಗೆ ತನ್ನ ಇಷ್ಟದಂತೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದವರಂತೆ ಸಂವಿಧಾನದ ಮೇಲೆ ಸವಾರಿ ನಡೆಸಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ದಲಿತ ಸಮುದಾಯ ಹಣಕ್ಕಾಗಿ , ವಿವಿಧ ಆಮಿಷಗೊಳಗಾಗಿ ಮತಾಂತರವಾಗುತ್ತಾರೆ ಎಂದು ಮುಖ್ಯಮಂತ್ರಿ , ಗೃಹಮಂತ್ರಿ, ಸ್ಪೀಕರ್ ಅವರ ಮಾತು ದಲಿತರ ಬಗೆಗಿನ ಮಾನಸಿಕತೆಯನ್ನು ಬಹಿರಂಗ ಪಡಿಸಿದೆ. ಈ ಬಗ್ಗೆ ಕೂಡಲೇ ಕ್ಷಮೆ ಯಾಚಿಸಿ ಈ ಕಾಯ್ದೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕಾಯ್ದೆಯನ್ನು ಏಕಪಕ್ಷೀಯವಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರೆ ರಾಜ್ಯದಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!