ದಸರಾ ರಜೆ ವಿಸ್ತರಣೆ ಸರಿದೂಗಿಸಲು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನ 1 ಗಂಟೆ ಹೆಚ್ಚುವರಿ ತರಗತಿ
ಬೆಂಗಳೂರು: ದಸರಾ ರಜೆ ವಿಸ್ತರಣೆಯಿಂದ ಕೊರತೆಯಾಗಿರುವ ಕಲಿಕಾ ಅವಧಿಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಳಿದಿರುವ ಶಾಲಾ ದಿನಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಅವಧಿ (ಪೀರಿಯಡ್) ತರಗತಿ ಬೋಧನೆಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಸೆ.22ರಿಂದ ಅ.7ರ ವರೆಗೆ ಇದ್ದ ದಸರಾ ರಜೆ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ದಸರಾ ರಜೆ ಅವಧಿಯನ್ನು ಅ.18ರ ವರೆಗೆ ವಿಸ್ತರಿಸಲಾಗಿತ್ತು.
ಇದರಿಂದಾಗಿ ಶಾಲಾಮಕ್ಕಳಿಗೆ ಅ.12ರ ಭಾನುವಾರ ರಜಾದಿನ ಹೊರತುಪಡಿಸಿ ಉಳಿದ 10 ದಿನಗಳ ಬೋಧನಾ ಅವಧಿ ಕೊರತೆಯಾಗಿದೆ.
ಇದನ್ನು ಸರಿದೂಗಿಸುವ ಸಲುವಾಗಿ ಫೆ.5ರ ವರೆಗಿನ 74 ಶಾಲಾ ದಿನಗಳಲ್ಲಿ ನಿತ್ಯ ಒಂದು ಅವಧಿ ಹೆಚ್ಚುವರಿ ತರಗತಿ ನಡೆಸಲು ಆದೇಶಿಸಲಾಗಿದೆ.




