ಲ್ಯಾಂಡಿಂಗ್ ವೇಳೆ ಸಮುದ್ರಕ್ಕೆ ಬಿದ್ದು ಕಾರ್ಗೊ ವಿಮಾನ ಅಪಘಾತ: ಇಬ್ಬರು ಮೃತ್ಯು
ಹಾಂಕಾಂಗ್: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ವಿಮಾನವು ಸೋಮವಾರ (ಅಕ್ಟೋಬರ್ 20) ಮುಂಜಾನೆ ರನ್ ವೇಯಿಂದ ಜಾರಿ ಸಮುದ್ರಕ್ಕೆ ಉರುಳಿ ಬಿದ್ದ ಪರಿಣಾಮ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ, ಸೋಮವಾರ ನಸುಕಿನ 3.50ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಇಬ್ಬರು ಈ ದುರಂತದ ಸಮಯದಲ್ಲಿ ವಿಮಾನ ನಿಲ್ದಾಣದ ವಾಹನದಲ್ಲಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ.
ದುಬೈನಿಂದ ಹಾಂಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಎಮಿರೇಟ್ ವಿಮಾನ ಸಂಖ್ಯೆಯಡಿ ಈ ಕಾರ್ಗೊ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ದೃಢಪಡಿಸಿವೆ. ವಿಮಾನಯಾನ ಸಂಸ್ಥೆ ತಕ್ಷಣಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯ್ಟರ್ಸ್ ವರದಿ ಮಾಡಿದೆ.
ವಿಮಾನದಲ್ಲಿದ್ದ ಎಲ್ಲ ನಾಲ್ಕು ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ವಿಮಾನ ನಿಲ್ದಾಣ ಸಿಬ್ಬಂದಿಯ ಪೈಕಿ ಒಬ್ಬರನ್ನೂ ರಕ್ಷಿಸಲಾಗಿದೆ. ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.




