February 2, 2026

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಹೊಟ್ಟೆಗೆ ಚುಚ್ಚಿದ ಮೀನು: ಯುವಕ ಸಾವು

0
image_editor_output_image1635439614-1760680699715.jpg

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನೊಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಯುವಕನೊಬ್ಬ ಸಾವನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ.

ಆದರೆ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಮತ್ತು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೃತರನ್ನು ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಎಂದು ಗುರುತಿಸಲಾಗಿದೆ.

ಅಕ್ಷಯ ಮಂಗಳವಾರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಿಂದ ಸುಮಾರು 8 ರಿಂದ 10 ಇಂಚು ಉದ್ದದ ಮೀನೊಂದು ಅನಿರೀಕ್ಷಿತವಾಗಿ ದೋಣಿಯೊಳಗೆ ಹಾರಿ ಬಂದಿದೆ. ಈ ಮೀನು ನೇರವಾಗಿ ಅಕ್ಷಯನ ಹೊಟ್ಟೆಗೆ ಚುಚ್ಚಿದ್ದು, ಆತನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಗಾಯಗೊಂಡ ಅಕ್ಷಯನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಗಾಯದ ಭಾಗಕ್ಕೆ ಹೊಲಿಗೆ ಹಾಕಿ, ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆ ಆಗದ ಕಾರಣ ಬುಧವಾರ ಅಕ್ಷಯ ಮರಳಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ, ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಅಕ್ಷಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದನು. ಮೀನಿನ ಮೂತಿಯಿಂದ ಚುಚ್ಚಿದ ಪರಿಣಾಮ ಅಕ್ಷಯನ ಕರುಳಿಗೆ ಗಂಭೀರ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮೀನುಗಾರರು ಮತ್ತು ಕುಟುಂಬ ಸದಸ್ಯರು ಕ್ರಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!