ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವೆಂದು ಬಿಂಬಿಸಿದ್ದ ವೈದ್ಯನ ಬಂಧನ
ಬೆಂಗಳೂರು: ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಡಾ.ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಂದ ಕಿರಾತಕ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿದ್ದ. ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ. ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ.
ಚರ್ಮರೋಗ ವೈದ್ಯೆ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ. 2024ರ ಮೇ 26 ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು.
ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು ಎನ್ನಲಾಗಿದೆ. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲುತ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕುಟುಂಬದಿಂದ ದೂರು ಪಡೆದು ಯುಡಿಆರ್ ದಾಖಲು ಮಾಡಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್‌ನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು.
ಮಣಿಪಾಲದಲ್ಲಿ ಆರೋಪಿ ಬಂಧನ: ಸದ್ಯ ಮಣಿಪಾಲದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಕೃತ್ಯದ ಬಗ್ಗೆ ಅಕ್ರಮ ಸಂಬಂಧದ ವಿಚಾರವೂ ಕೇಳಿ ಬರುತ್ತಿದೆ. ಕೃತಿಕಾ ತಂದೆ, ಮಹೇಂದ್ರನಿಗೆ ಬೇರೆ ಯುವತಿಯರೊಂದಿಗೆ ಸಂಬಂಧ ಇತ್ತು ಎಂಬುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.




