February 1, 2026

ಉಡುಪಿ-ಕಾಸರಗೋಡು ೪೦೦ಕೆ.ವಿ ವಿದ್ಯುತ್ ಸಂಪರ್ಕ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ: ಡಿ.ಸಿ ಆಗಮನಕ್ಕೆ ಪಟ್ಟು ಹಿಡಿದು ಮುಖಂಡರು-ತಹಶೀಲ್ದಾರ್ ಮನವಿ ಸ್ಪಂದಿಸಿದ ಪ್ರತಿಭಟನಾಕಾರರು

0
image_editor_output_image1075975162-1760028072449

ವಿಟ್ಲ: ೪೦೦ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಗುರುವಾರ ಬೆಳಗ್ಗೆ ಹಿಂದು ಸಮಾಜದ ಮತ್ತು ರೈತರ  ಬೃಹತ್ ಶಕ್ತಿ ಪ್ರದರ್ಶನ ಮಂಗಳಪದವಿನಲ್ಲಿ ಗುರುವಾರ ನಡೆಯಿತು.

ದಿಕ್ಸೂಚಿ ಭಾಷಣ ಮಾಡಿದ ಧಾರ್ಮಿಕ ಚಿಂತಕ ಮಂಜುನಾಥ ಉಡುಪ ಮಾತನಾಡಿ ಚುನಾವಣೆ ಬಂದಾಗ ಜನರ ಕೈಕಾಲು ಹಿಡಿದು ಮತ ಕೇಳುವ ರಾಜಕಾರಣಿಗಳು
ಈಗ ಎಲ್ಲಿದ್ದಾರೆ. ಜನರ ಹೋರಾಟದಿಂದ ನಾಪತ್ತೆಯಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ
ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಇಲಾಖೆಗಳ ಮೂಲಕ ಹೋರಾಟಗಾರರ ಶಕ್ತಿಯನ್ನು ದಮನಿಸುವ ಕಾರ್ಯ ಮಾಡಿದರೆ, ಜನ ವಿರೋಧದ ನಡುವೆಯೂ ಅನುಷ್ಠಾನಕ್ಕೆ ಮುಂದಾದರೆ, ಸಮಸ್ಯೆಗಳು ಉದ್ಬವಿಸಿದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ನೇರ ಹೊಣೆ ಹೊರಬೇಕು.ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಈ ಯೋಜನೆ ವಿರುದ್ಧ ಬೃಹತ್ ಆಂದೋಲನ ನಡೆಸಬೇಕಾಗಿದೆ. ಊರಿಗೆ ಮಾರಕವಾಗುವ ಯೋಜನೆಗೆ ಯಾರೂ ಬೆಂಬಲ ನೀಡಬಾರದು ಎಂದು ಹೇಳಿದರು.

ಹಿಂದೂ ಜಾಗರಣೆ ವೇದಿಕೆಯ ನರಸಿಂಹ ಮಾಣಿ, ಅಕ್ಷಯ ರಜಪೂತ್, ರೈತ ಸಂಘದ ಶೀಧರ ಶೆಟ್ಟಿ ಬೈಲುಗುತ್ತು, ಮಾಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ರೈತ ಸಂಘಟನೆಯ ಇದಿನಬ್ಬ ನಂದಾವರ, ಅಲ್ಫೊನ್ಸ್ ಡಿಸೋಜಾ ಚಂದ್ರಶೇಖರ ಇನ್ನಾ ಮೊದಲಾದವರು ಮಾತನಾಡಿದರು.

ರೈತರಿಗೆ ಅನ್ಯಾಯ ಆಗುವ ಜತೆಗೆ ತುಳುನಾಡಿನ ದೈವ ದೇವರ ಪವಿತ್ರ ಸಾನಿಧ್ಯಗಳಿಗೆ ಹಾನಿಯಾಗುತ್ತಿದೆ. ದೈವಸ್ಥಾನ, ದೇವಸ್ಥಾನ, ನಾಗ ಬನ, ಮಸೀದಿ, ಚರ್ಚ್, ಶಾಲೆಗಳ ಮೇಲೆಯೇ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ. ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಮೇಲೆ, ಕಜಂಬು ಉತ್ಸವ ನಡೆಯುವ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಪ್ರಸರಣ ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಜನರ ಧಾರ್ಮಿಕ ಭಾವನೆ ದಕ್ಕೆಯಾಗುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಉಡುಪಿಯಿಂದ ಕಾಸರಗೋಡಿಗೆ ಸಮುದ್ರ ಮೂಲಕ ಸುಮಾರು ೮೦ಕಿ.ಮೀ.ಯಲ್ಲಿ ವಿದ್ಯುತ್ ಮಾರ್ಗ ರಚನೆ ಮಾಡಬಹುದಿದ್ದು, ಇದಕ್ಕೆ ೧೪೪೦ಕೋಟಿ ರೂ. ಮಾತ್ರ ವೆಚ್ಚವಾಗಲಿದೆ. ಹೀಗೆ ಮಾಡುವುದರಿಂದ ಯಾರೊಬ್ಬರಿಗೂ ಸಮಸ್ಯೆಯೂ ಆಗುವುದಿಲ್ಲ ಎನ್ನುವ ರೈತರು ಈ ಕಾರಣಕ್ಕೆ ಈಗಿನ ಯೋಜನೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಲಾಗಿದೆ  ಎಂದು ಸಭೆಯಲ್ಲಿ ಮುಖಂಡರು ಹೇಳಿದರು.
ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು:
ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದು ಕುಳಿತರು. ಜಿಲ್ಲಾಧಿಕಾರಿ ಅವರು ಡೆಪ್ಯುಟಿ ತಹಶಿಲ್ದಾರರನ್ನು ಸ್ಥಳಕ್ಕೆ ಕಳುಹಿಸಿದರೂ ಒಪ್ಪದ ರೈತರು ಜಿಲ್ಲಾಧಿಕಾರಿಯೇ ಬರಬೇಕು ಎಂದು ಹಟ ಹಿಡಿದರು. ವಿಟ್ಲ- ಕಲ್ಲಡ್ಕ ರಸ್ತೆ ಸಂಪರ್ಕ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು.

ತಾಲೂಕು ತಹಶಿಲ್ದಾರರ್ ಮಂಜುನಾಥ ಪ್ರತಿಭಟನೆ ಕಾರರ ಮನವೊಲಿಸಲು ಯಶಸ್ವಿಯಾದರು. ವಿದ್ಯುತ್ ಪ್ರಸರಣ ಯೋಜನೆ ಕಾಮಗಾರಿಯನ್ನು  ತಕ್ಷಣ ನಿಲ್ಲಿಸುವಂತೆ ಗುತ್ತಿಗೆ ವಹಿಸಿಕೊಂಡವರಿಗೆ ತಿಳಿಸಲಾಗಿದೆ ಮುಂದಿನ ವಾರದೊಳಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡು ಸಾರ್ವಜನಿಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ಕಾರರು ಸಲ್ಲಿಸಿದ  ಮನವಿ ಸ್ವೀಕರಿಸಿದರು.

ಚಿತ್ತರಂಜನ್ ಪ್ರಸ್ತಾವನೆಗೈದರು. ರೈತ ಸಂಘದ ಶಿವಾನಂದ ಮತ್ತು ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ಕಾರ್ಯದರ್ಶಿ ಬಿ. ದೇವಿಪ್ರಸಾದ್ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿದರು.

ಮಂಗಳ ಪದವಿನಲ್ಲಿ ನಡೆದ ಬೃಹತ್ ಸಭೆಯ ಬಳಿಕ ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ನಡೆಯಿತು ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು
ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ಹಲವು ಹಿಂದೂ ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ಆಯೋಜಿಸಲಾಗಿತ್ತು.
ಹಿಂದೂ ಮುಸ್ಲಿಂ ಕ್ರೈಸ್ತ ರು ಎಂಬ ಬೇಧವಿಲ್ಲದೇ ಎಲ್ಲಾ ಸಮುದಾಯದ ರೈತರು, ಕೃಷಿಕರು ಪಾಲ್ಗೊಂಡಿದ್ದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
,,,,,,

Leave a Reply

Your email address will not be published. Required fields are marked *

error: Content is protected !!