ಬೆಳ್ತಂಗಡಿ: ಸೌಜನ್ಯಾಳನ್ನು ಆಕೆಯ ಮಾವ ಕೊಲೆ ಮಾಡಿರುವುದಾಗಿ ಹೇಳಿಕೆ: ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲು
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆ ಏಕಾಏಕಿ ಬಂದು ಕುಮಾರಿ ಸೌಜನ್ಯಾಳನ್ನು ಆಕೆಯ ಮಾವ ವಿಠಲ ಗೌಡ ಕೊಲೆ ಮಾಡಿರುವುದಾಗಿ ಆರೋಪ ಮಾಡಿ ಹೇಳಿಕೆ ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಇಂದಬೆಟ್ಟು ಗ್ರಾಮದ ವೆಂಕಪ್ಪ ಕೋಟ್ಯಾನ್ ಎಂಬವರು ದೂರು ನೀಡಿದ್ದಾರೆ.
ಈಗಾಗಲೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಮುಂದುವರೆಸಿದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಠಾಣೆಯಲ್ಲಿ ಶನಿವಾರವೂ ವಿಚಾರಣೆ ಮುಂದುವರಿಯಿತು. ಶನಿವಾರ ಗಿರೀಶ್ ಮಟ್ಟಣ್ಣವರ್, ಜಯಂತ ಟಿ., ವಿಠಲ ಗೌಡ, ಪ್ರದೀಪ್ ಹಾಗೂ ಯೂಟ್ಯೂಬರ್ ಅಭಿಷೇಕ್ ಅವರ ವಿಚಾರಣೆ ನಡೆದಿದೆ. ಗಿರೀಶ್ ಮಟ್ಟಣ್ಣವರ್ ಅವರ ಒಂಬತ್ತನೇ ದಿನದ ಹಾಗೂ ಜಯಂತ ಟಿ. ಅವರ ಹತ್ತನೇ ದಿನದ ವಿಚಾರಣೆ ನಡೆಯಿತು.
ಸೆಪ್ಟೆಂಬರ್ 10ರಂದು ಒಂದು ಹಂತದ ವಿಚಾರಣೆ ಮುಗಿಸಿ ವಾಪಸಾಗಿದ್ದ ಯುಟ್ಯೂಬರ್ ಅಭಿಷೇಕ್ ಶನಿವಾರ ಮಧ್ಯಾಹ್ನ ಮತ್ತೆ ಎಸ್‌ಐಟಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ನಡುವೆ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ಕೊಲೆಯಾದ ಕುಮಾರಿ ಸೌಜನ್ಯಾಳನ್ನು ಆಕೆಯ ಮಾವ ವಿಠಲ ಗೌಡ ಕೊಲೆ ಮಾಡಿರುವುದಾಗಿ ಆರೋಪ ಮಾಡಿ ಹೇಳಿಕೆ ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಇಂದಬೆಟ್ಟು ಗ್ರಾಮದ ವೆಂಕಪ್ಪ ಕೋಟ್ಯಾನ್ ಎಂಬವರು ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ವಿಠಲ ಗೌಡ ಅವರ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಇದು ಸೌಜನ್ಯಾ ಕೊಲೆಗಾರರನ್ನು ಪತ್ತೆ ಹಚ್ಚಬೇಕು ಎಂದು ನಡೆಯುತ್ತಿರುವ ಹೋರಾಟವನ್ನು ದಾರಿ ತಪ್ಪಿಸುವ ದುರುದ್ದೇಶದಿಂದ ಮಾಡಿರುವುದಾಗಿದೆ. ಆದ್ದರಿಂದ ಠಾಣೆಗೆ ಕರೆಸಿ ಕುಲಂಕಷವಾಗಿ ವಿಚಾರಣೆ ನಡೆಸಬೇಕು ಹಾಗೂ ದೂರು ನೀಡಲು ಪ್ರೇರೇಪಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.





