ಮಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ: ಆರೋಪಿಗೆ ಮರಣದಂಡನೆ ಶಿಕ್ಷೆ
ಮಂಗಳೂರು: ಅಪ್ರಾಪ್ತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಫ್‌ಸಿ-2 ಪೊಕ್ಸ್ ನ್ಯಾಯಾಲಯವು ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಳಗಾವಿ ಸವದತ್ತಿ ತಾಲೂಕು ಹಂಚಿನಾಳ ಗ್ರಾಮ ಮಾದರ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ (58) ಶಿಕ್ಷೆಗೊಳಗಾದ ಆರೋಪಿ.
ಅಪ್ರಾಪ್ತಯು ಮೂಲತಃ ಬೆಳಗಾವಿ ಜಿಲ್ಲೆಯ ಚುಂಚನೂರು ಗ್ರಾಮದ ನಿವಾಸಿಯಾಗಿದ್ದು, ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಬಾಲಕಿಯ ಕುಟುಂಬ ಮಂಗಳೂರಿನ ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಬಾಲಕಿಯ ತಾಯಿ ತನ್ನ ಮಗಳನ್ನು ತನ್ನ ಸೋದರ ಸಂಬಂಧಿಯ ಮನೆಯಲ್ಲಿ ಬಿಟ್ಟು ವಸತಿ ಶಾಲೆಗೆ ಕರೆದುಕೊಂಡು ಹೋಗುವಂತೆ ಹೇಳಿ ಊರಿಗೆ ತೆರಳಿದ್ದರು.
2024ರ ಆಗಸ್ಟ್ 6ರಂದು ಬೆಳಗ್ಗೆ ಬಾಲಕಿಯ ಮಾವ ಗಾರೆ ಕೆಲಸಕ್ಕೆ ಹೊರಟಿದ್ದರೆ, ಅವರ ಪತ್ನಿ ಊರಿಗೆ ಹೋಗಿದ್ದರು. ಹಾಗಾಗಿ ಆ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಪಕ್ಕದ ಬಾಡಿಗೆ ಮನೆಯಲ್ಲಿದ್ದ ಆರೋಪಿ ಫಕೀರಪ್ಪ ಹಣಮಪ್ಪ ಮಾದರ ಬಾಲಕಿಯಿದ್ದ ಮನೆಗೆ ಅಕ್ರಮ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಆಕೆಗೆ ಮುಖಕ್ಕೆ ಕಚ್ಚಿ ಗಾಯಗೊಳಿಸಿದ್ದ. ಬಳಿಕ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.




