ನೇಪಾಳ: ಫೇಸ್‌ಬುಕ್ ಸೇರಿ 26 ಸೋಷಿಯಲ್ ಮೀಡಿಯಾ ಮೇಲಿನ ನಿರ್ಬಂಧ ವಿರೋಧಿಸಿ ಪ್ರತಿಭಟನೆ: ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ 9 ಮಂದಿ ಮೃತ್ಯು
ನೇಪಾಳ: ಕೆಪಿ ಶರ್ಮಾ ಓಲಿ ಸರಕಾರದಲ್ಲಿನ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಸರಕಾರದ ಕ್ರಮದ ವಿರುದ್ಧ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ‘ಜೆನ್ ಝಡ್’ ಬೃಹತ್ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳನ್ನು ನಿಷೇಧ ಮಾಡಿದ ಹಿನ್ನೆಲೆ ಸರ್ಕಾರದ ವಿರುದ್ಧ ನೇಪಾಳದ ಜನತೆ ಸಿಡಿದೆದ್ದಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನಾಕಾರರು ಬೀದಿಗಿಳಿದಾಗ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದು, ಕನಿಷ್ಠ 9 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೋಪಗೊಂಡ ಪ್ರತಿಭಟನಾಕಾರರು ಕರ್ಫ್ಯೂ ನಿರ್ಬಂಧಗಳನ್ನು ಮುರಿದು ಸಂಸತ್ತಿನ ಬಳಿಯ ನಿರ್ಬಂಧಿತ ವಲಯಗಳನ್ನು ಪ್ರವೇಶಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನೇಪಾಳ ರಾಜಧಾನಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ.
ಪ್ರತಿಭಟನಾಕಾರರು ಮರದ ಕೊಂಬೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡು ಸಿಡಿಸಿದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಸಂಸತ್ತಿನ ಆವರಣವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗದ್ದು ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.
ಸಾವಿರಾರು ಯುವ ನೇಪಾಳಿಗಳು ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿ, ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು. ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರದ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.




