ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ: ಆರೋಪಿಗಳಾದ ಪ್ರಶಾಂತ್, ಪ್ರವೀಣ್ ಬಂಧನ
ರಾಯಚೂರು: ರಾಯಚೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದರ್ ಬಜಾರ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಪ್ರಶಾಂತ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ.
ರಾಯಚೂರಿನ ಗಂಗಾ ನಿವಾಸ ರಸ್ತೆಯಲ್ಲಿ ಈ ಹಿಂದೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವ ವೇಳೆ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು.
ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಬರುತ್ತಿರುವ ವೇಳೆ ಸಮೀಪದ ಅಂಗಡಿ ಮೇಲೆ ಹತ್ತಿದ್ದ ಇಬ್ಬರು ದುಷ್ಕರ್ಮಿಗಳು ನೋಡ ನೋಡುತ್ತಲೇ ಕಲ್ಲು ತೆಗೆದುಕೊಂಡು ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು.
ಈ ವೇಳೆ ಮಂಗಳವಾರ ಪೇಟೆ ನಿವಾಸಿಗಳಾದ ವಿನಯ್ ಮತ್ತು ಗಣೇಶ್ ಎಂಬುವವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ವಿಡಿಯೋ ವೈರಲ್: ಆರೋಪಿಗಳು ಕಲ್ಲು ತೂರಾಟ ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಸ್ಥಳೀಯರ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.




