ಸುಳ್ಯ: ಕಾರು ಮತ್ತು ಟ್ಯಾಂಕರ್ ನಡುವೆ ರಸ್ತೆ ಅಪಘಾತ: ಮಹಿಳೆ ಮೃತ್ಯು, ಇಬ್ಬರು ಗಂಭೀರ ಗಾಯ
ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿ ಬಳಿಯ ಕಡೇಪಾಲ ಬಳಿ ಬುಧವಾರ ಬೆಳಿಗ್ಗೆ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದಿಕೇರಿಯ ನಿವಾಸಿ ಶೋಭಾ ಎಂದು ಗುರುತಿಸಲಾಗಿದೆ.
ಟ್ಯಾಂಕರ್ ಮಡಿಕೇರಿಯಿಂದ ಸುಳ್ಯದ ಕಡೆಗೆ ಚಲಿಸುತ್ತಿತ್ತು, ಆದರೆ ಕಾರು ಮಡಿಕೇರಿ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು. ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಶೋಭಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ದೇವಯ್ಯ(54) ಹಾಗೂ ಪ್ರಯಾಣಿಕರಾದ ವನಜಾಕ್ಷಿ(44) ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಮತ್ತು ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರು ನಡುವೆ ತಿರುವು ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




