February 1, 2026

ಬೊಳಂತಿಮೊಗರು ಸರಕಾರಿ ಉರ್ದು ಹಿ.ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ: ಸರಕಾರಿ‌ ಶಾಲೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ‌ ಮೇಲಿದೆ: ಶಾಸಕ ಅಶೋಕ್ ರೈ

0
image_editor_output_image-1751729543-1755957389102

ವಿಟ್ಲ: ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಅಪಾಯಕಾರಿಯಾಗಿದೆ, ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ತರಬೇತಿ ಪಡೆದ ಶಿಕ್ಷಕರನ್ನು ಸರಕಾರ ನಿಯೋಜನೆ ಮಾಡುತ್ತಿದೆ, ಸರಕಾರಿ ಶಾಲೆಗಳು‌ ಮಕ್ಕಳಿಲ್ಲದೆ ಬಾಗಿಲು ಮುಚ್ಚಿದ್ದೇ ಆದಲ್ಲಿ ಅದರ ಪರಿಣಾಮ ಘೋರವಾಗಿರುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಬೊಳಂತಿಮೊಗರು ಸರಕಾರಿ ಉರ್ದು ಹಿ.ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಿ ಮಾತನಾಡಿದರು.

ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿ. ಮಕ್ಕಳು‌ ಮುಂದೆ ಏನಾಗಬೇಕು‌ ಎಂಬುದನ್ನು ಪೋಷಕರೇ ನಿರ್ಧರಿಸಬೇಕು. ಶಿಕ್ಷಣದ ಅಡಿಪಾಯ ಗಟ್ಟಿಯಾಗಿರಲಿ. ಬಡವರ ಮಕ್ಕಳೂ ಇಂಗ್ಲೀಷ್ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕೆ ಸರಕಾರ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷಾ ಜ್ಞಾನ ಕಡ್ಡಾಯವಾಗಿ ಗೊತ್ತಿರಬೇಕು. ಶಾಲೆಗೆ ದಾಖಲಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಪೋಷಕರೂ ಮಕ್ಕಳ ಕಲಿಕೆಯ ಬಗ್ಗೆ ನಿತ್ಯ ಅರಿವು ಉಳ್ಳವರಾಗಬೇಕು.‌ ಇಂದಿನ ಮಕ್ಕಳೇ ಮುಂದೆ ದೇಶ, ರಾಜ್ಯವನ್ನಾಳುವವರು ಎಂಬ ಪರಿಜ್ಞಾನ ಪ್ರತೀಯೊಬ್ಬರಲ್ಲೂ ಇರಬೇಕಾಗುತ್ತದೆ ಎಂದು ಶಾಸಕರು‌ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ಮಾತನಾಡಿ ಬಾಗಿಲು‌ ಮುಚ್ಚಲಿದ್ದ ಈ ಶಾಲೆಗೆ ಶಾಸಕರು ಸೌಲಭ್ಯವನ್ನು ಕಲ್ಪಿಸುವ ಮೂಲಕ ಮತ್ತೆ ಬಾಗಿಲು‌ತೆರೆದಿದ್ದಾರೆ. 16 ಮಕ್ಕಳ ಸಂಖ್ಯೆ ಇದ್ದ ಈ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ ನೂರು ದಾಟಿದೆ. ಶಾಲೆಗೆ ಕಾಂಕ್ರೀಟ್ ರಸ್ತೆ, ಬೆಂಚ್, ಡೆಸ್ಕ್, ಶೌಚಾಲಯವನ್ನು ಶಾಸಕ ಅಶೋಕ್ ರೈ ನೀಡಿದ್ದಾರೆ. ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ಶಾಲೆಗೆ ಪುನರ್ಜನ್ಮ‌ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಗ್ರಾ.ಪಂ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಅಕ್ರಮ ಸಕ್ರಮ ಸಮಿತಿಯ ರಾಮಣ್ಣ ಪಿಲಿಂಜ, ಶಿಕ್ಷಣ ಇಲಾಖೆಯ ನೋಣಯ್ಯ, ಸಿಆರ್ ಪಿ ಬಿಂಧು, ಪಟ್ಟಣ ಪಂಚಾಯತ್ ನಾಮ ನಿರ್ದೇಶಕ ಸದಸ್ಯ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್, ಲತಾ ಅಶೋಕ್, ಹಿರಿಯರಾದ ಯಾಸೀನ್ ಬೇಗ್, ಅಶೋಕ್ ಪೂಜಾರಿ, ರಕ್ಷಾ ಸಮಿತಿಯ ಅಬ್ದುಲ್ ರಹಿಮಾನ್, ಮುಬೀನಾ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ರೇಷ್ಮಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಉದಯ್ ಪ್ರಸ್ತಾವನೆ ಮಾಡಿದರು. ಶಿಕ್ಷಕಿ ಮೀನಾಕ್ಷಿ  ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!