ಐದು ವರ್ಷದ ಮಗನನ್ನು ರಕ್ಷಿಸಲು ಮೊಸಳೆಯ ಜೊತೆ ಹೋರಾಡಿದ ತಾಯಿ
ಲಕ್ನೋ: ಮಹಿಳೆಯೊಬ್ಬರು ಮೊಸಳೆಯ ಜೊತೆ ಹೋರಾಡಿ ಐದು ವರ್ಷದ ಮಗನನ್ನು ಸಾವಿನ ದವಡೆಯಿಂದ ರಕ್ಷಿಸಿದ ಅಪರೂಪದ ಘಟನೆ ಸೋಮವಾರ ಸಂಜೆ ಉತ್ತರಪ್ರದೇಶದ ಬಹರೀಚ್ ನ ಧಾಕಿಯಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚರಂಡಿಯಲ್ಲಿ ಐದು ನಿಮಿಷಗಳ ಕಾಲ ಹೋರಾಡಿದ ಮಹಿಳೆಗೆ ಪ್ರತಿ ಕ್ಷಣವೂ ಸಾವು ಮತ್ತು ಬದುಕಿನ ಹೋರಾಟವಾಗಿತ್ತು. ಮೊಸಳೆಯನ್ನು ಹಿಡಿದು, ತರಚಿ ಕೊನೆಗೆ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಏಳು ಅಡಿ ಉದ್ದದ ಸರೀಸೃಪ ಮಗುವನ್ನು ಬಿಟ್ಟು ನಾಲೆಯಲ್ಲಿ ಕಣ್ಮರೆಯಾಗುವಂತೆ ಮಾಡಿದ ಘಟನೆ ನಡೆದಿದೆ.
ಐದು ವರ್ಷದ ಮಗ ವೀರೂ ನಾಲೆಯ ಬಳಿ ಆಟವಾಡುತ್ತಿದ್ದಾಗ, ಮೊಸಳೆ ಹಿಡಿದು ನೀರಿನತ್ತ ಎಳೆಯಿತು. “ನನ್ನ ಜೀವದ ಹಂಗು ತೊರೆದು ನಾಲೆಗೆ ಧುಮುಕಿದೆ. ಮೊಸಳೆ ಆತನನ್ನು ಆಳಕ್ಕೆ ಎಳೆಯುತ್ತಿತ್ತು. ಆದರೆ ನಾನು ನನ್ನೆಲ್ಲ ಶಕ್ತಿಯನ್ನು ಒಗ್ಗೂಡಿಕೊಂಡು ಹಿಡಿದುಕೊಂಡೆ. ಮೊಸಳೆಯನ್ನು ಹೊಡೆದೆ, ಪರಚಿದೆ, ಅದರೂ ಅದು ಬಿಡಲಿಲ್ಲ. ನನ್ನೆಲ್ಲ ಶಕ್ತಿ ಒಗ್ಗೂಡಿಸಿಕೊಂಡು ಹೋರಾಡಿದೆ. ಅಂತಿಮವಾಗಿ ನಾನು ಹಿಡಿದಿದ್ದ ಕಬ್ಬಿಣದ ರಾಡ್ ನಿಂದ ಮೊಸಳೆಗೆ ಹೊಡೆದಾಗ ಅಂತಿಮವಾಗಿ ಅದು ಮಗನನ್ನು ಬಿಟ್ಟಿತು. ಮಗ ಕೊನೆಗೂ ಬದುಕಿ ಉಳಿದ” ಎಂದು ಬಣ್ಣಿಸಿದರು.
ವೀರೂಗೆ ತೀವ್ರ ಗಾಯಗಳಾಗಿದ್ದು, ಮಾಯಾ ಕೂಡಾ ತರಚಿದ ಗಾಯಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




