December 20, 2025

ಛತ್ತೀಸ್‌ಗಢ: ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು

0
n344208054164033896491382d177339b0e1cf1e96c8d625296e0e55e6278d041c0c6d12e17f61e0822d966.jpg

ರಾಯ್‌ಪುರ: ಛತ್ತೀಸ್‌ಗಡದ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಮತ ಎಣಿಕೆ ಪೂರ್ಣಗೊಂಡ 300 ವಾರ್ಡ್‌ಗಳ ಪೈಕಿ 174ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. 89 ವಾರ್ಡ್‌ಗಳಲ್ಲಿ ಗೆದ್ದಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಹಿನ್ನಡೆ ಅನುಭವಿಸಿದೆ.

15 ನಗರ ಸಂಸ್ಥೆಗಳು ಮತ್ತು 15 ಪ್ರತ್ಯೇಕ ವಾರ್ಡ್‌ಗಳ ಉಪಚುನಾವಣೆಯ ಮತದಾನ ಸೋಮವಾರ ನಡೆದಿತ್ತು. ಮತಎಣಿಕೆ ಕಾರ್ಯ ಗುರುವಾರ 29 ಕೇಂದ್ರಗಳಲ್ಲಿ ನಡೆಯಿತು.

ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ‘ನಮ್ಮ ಸರ್ಕಾರ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳ ಯಶಸ್ಸನ್ನು ಈ ಫಲಿತಾಂಶ ಸೂಚಿಸುತ್ತಿದೆ,’ ಎಂದು ಹೇಳಿದರು.

15 ನಗರ ಸಂಸ್ಥೆಗಳ ಒಟ್ಟು 370 ವಾರ್ಡ್‌ಗಳ ಪೈಕಿ 300 ವಾರ್ಡ್‌ಗಳ ಫಲಿತಾಂಶವನ್ನು ಚುನಾವಣಾ ಆಯೋಗ ಈ ವರೆಗೆ ಪ್ರಕಟಿಸಿದೆ. 174 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು, 89 ರಲ್ಲಿ ಬಿಜೆಪಿ, 6 ರಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್‌ಗಡ (ಜೆ) ಮತ್ತು 31 ರಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ದುರ್ಗ್ ಜಿಲ್ಲೆಯ ಭಿಲಾಯಿ ಮುನ್ಸಿಪಲ್ ಕಾರ್ಪೊರೇಶನ್‌ಗೆ ಒಳಪಡುವ ಉಳಿದ 70 ವಾರ್ಡ್‌ಗಳ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ. ಅಲ್ಲಿನ ಮತ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಿಲಾಯಿ ಕಾರ್ಪೊರೇಶನ್‌ನ 70 ವಾರ್ಡ್‌ಗಳ ಮತ ಎಣಿಕೆ ಟ್ರೆಂಡ್‌ ಪ್ರಕಾರ ಬಿಜೆಪಿಗಿಂತಲೂ ಕಾಂಗ್ರೆಸ್‌ ಮುಂದಿದೆ. ಈ 70 ವಾರ್ಡ್‌ಗಳಲ್ಲಿ ಕಾಂಗ್ರೆಸ್ 37 , ಬಿಜೆಪಿ 24, ಇತರರು 8 ರಲ್ಲಿ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 1 ರಲ್ಲಿ ಮುಂದಿವೆ.

Leave a Reply

Your email address will not be published. Required fields are marked *

You may have missed

error: Content is protected !!