ಮತಾಂತರ ನಿಷೇಧ ಕಾಯ್ದೆ ಅರ್ ಎಸ್ ಎಸ್ ಅಜೆಂಡಾ ಎಂದು ಒಪ್ಪಿಕೊಳ್ಳುತ್ತೇನೆ: ಸಚಿವ ಅಶ್ವಥ್ ನಾರಾಯಣ್
ಬೆಳಗಾವಿ: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ವಿಧಾನಸಭೆಯಲ್ಲಿ ಪಾಸ್ ಆಗಿದೆ. ಮಸೂದೆ ಬಗ್ಗೆ ಸಾಕಷ್ಟು ಚರ್ಚೆ ಆಯಿತು. ಮಸೂದೆ ಕುರಿತ ಚರ್ಚೆ ಸಂದರ್ಭದಲ್ಲಿ ಹಲವಾರು ವಿಚಾರಗಳ ಬೆಳಕಿಗೆ ಬಂದಿದೆ ಮತ್ತು ಪ್ರತಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ಮಸೂದೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ್ ಅವರು, ಯಾವುದೇ ಆಮಿಷಕ್ಕೆ ಒತ್ತಡಕ್ಕೆ ಒಳಗಾಗಿ ಮತಾಂತರ ಆಗಬಾರದು. ಇದು ಸಮಾಜದ ಸಂಸ್ಕೃತಿಗೆ ಪೂರಕವಾಗಿರುವುದಿಲ್ಲ. ಸಿದ್ದರಾಮಯ್ಯ ಅವರೇ ಇದನ್ನು ಜಾರಿಗೆ ತರಬೇಕು ಅಂತ ಹೊರಟಿದ್ರು. ಸಮಾಜಕ್ಕೆ ಒಳ್ಳೆದಾಗುವ ಕಾಯ್ದೆ ಇದು ಎಂದಿದ್ದಾರೆ.
ನಾವು ಈಗ ಧರ್ಮಗಳ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದೇವೆ. ಇಡೀ ವಿಶ್ವದಲ್ಲೇ ಭಾರತೀಯರು ಇದನ್ನು ಎದುರು ನೋಡುತ್ತಿದ್ದರು. ಇದರ ಕ್ರೆಡಿಟ್ ನಮಗೆ ಬರಬೇಕು. ಅವರು ಸಹಕಾರ ನೀಡಿದ್ದರೆ ಅವರಿಗೂ ಕ್ರೆಡಿಟ್ ಬಂದಿರೋದು ಎಂದರು.
ಈ ಮಸೂದೆ ಆರ್ ಎಸ್ ಎಸ್ ನ ಅಜೆಂಡಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಸಮಾಜದ ಪರವಾಗಿದೆ. ಮತಾಂತರ ನಿಷೇಧದ ಬಗ್ಗೆ ಸಂವಿಧಾನದಲ್ಲಿದೆ. ಹೆಚ್ಚಿನ ಸ್ಪಷ್ಟತೆ ಕೊಡೋದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್ ಎಸ್‌ಎಸ್ ಅಜೆಂಡಾ ಅಂತ ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.





