March 18, 2026

ಧರ್ಮಸ್ಥಳ ಪ್ರಕರಣ: ಕುಡ್ಲ ರ‍್ಯಾಂಪೇಜ್‌ ವಿರುದ್ಧದ ಪ್ರತಿಬಂಧಕಾದೇಶ ರದ್ದು

0
image_editor_output_image-447499183-1754113758905.jpg

ಧರ್ಮಸ್ಥಳ: ಇಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ಕುಡ್ಲ ರ‍್ಯಾಂಪೇಜ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಏಕಪಕ್ಷಕೀಯ ಪ್ರತಿಬಂಧಕಾದೇಶವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರದ್ದುಪಡಿಸಿ ಮಹತ್ವದ ಆದೇಶ ಮಾಡಿದೆ. ಇದರಿಂದ ಹರ್ಷೇಂದ್ರ ಕುಮಾರ್‌ಗೆ ಹಿನ್ನಡೆಯಾಗಿದೆ.

ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್‌ ಪ್ರಧಾನ ಸಂಪಾದಕ ಅಜಯ್‌ ಅವರು ಮಾಧ್ಯಮಗಳ ಮೇಲಿನ ನಿರ್ಬಂಧದ ಆದೇಶ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

“ಕುಡ್ಲ ರ‍್ಯಾಂಪೇಜ್‌ ಪ್ರಧಾನ ಸಂಪಾದಕ ಅಜಯ್‌ ಸಲ್ಲಿಸಿರುವ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ. 66ನೇ ಪ್ರತಿವಾದಿಯಾದ ಕುಡ್ಲ ರ‍್ಯಾಂಪೇಜ್‌ ವಿರುದ್ಧ 18.7.2025ರಂದು ವಿಚಾರಣಾಧೀನ ನ್ಯಾಯಾಲಯವು ಮಾಡಿರುವ ಆಕ್ಷೇಪಾರ್ಹವಾದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ರದ್ದುಪಡಿಸಲಾಗಿದೆ.

ಮಧ್ಯಂತರ ಅರ್ಜಿಯನ್ನು ಹೊಸದಾಗಿ ಪರಿಗಣಿಸಲು ಪ್ರಕರಣವನ್ನು ಸಕ್ಷಮ ನ್ಯಾಯಾಲಯಕ್ಕೆ ವಾಪಸ್‌ ಕಳುಹಿಸಲಾಗುತ್ತಿದೆ. ವಿಚಾರಣಾಧೀನ ನ್ಯಾಯಾಲಯವು ಈ ಆದೇಶದಲ್ಲಿ ಮಾಡಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಕ್ಷಮ ನ್ಯಾಯಾಲಯವು ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ.

ಇದೇ ವೇಳೆ, ಸಿವಿಲ್‌ ದಾವೆ, ಕ್ರಿಮಿನಲ್‌ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಮೇಲೆ ಈ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಪರಿಗಣಿಸಿರುವ ಒಂದು ಅಂಶವನ್ನು ಹೊರತುಪಡಿಸಿ ಪಕ್ಷಕಾರರ ನಡುವೆ ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯವು ಹೇಳಿದೆ.

“ಈ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತು ಇತರೆ ಎಲ್ಲಾ ಪಕ್ಷಕಾರರು ಸಕ್ಷಮ ನ್ಯಾಯಾಲಯಕ್ಕೆ ಆದೇಶ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್‌ ಪ್ರಧಾನ ಸಂಪಾದಕ ಅಜಯ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ಎ ವೇಲನ್‌ ಅವರು “ವಿಚಾರಣಾಧೀನ ನ್ಯಾಯಾಲಯದ ಪ್ರತಿಬಂಧಕಾದೇಶವು ವ್ಯಾಪ್ತಿ ಮೀರಿದ್ದು, ಅದು ನಿಲ್ಲುವುದಿಲ್ಲ. ನಿರಂತರವಾಗಿ ಹರ್ಷೇಂದ್ರ ಕುಮಾರ್‌ ಅವರು ಎಷ್ಟು ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ ಎಂಬುದನ್ನು ಹೇಳಬೇಕು. ಮಾನಹಾನಿಯ ಅಂಶಗಳನ್ನು ಪರಿಶೀಲಿಸದೇ ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳನ್ನು ನಿರ್ಬಂಧಿಸಿದೆ. 9,000 ಲಿಂಕ್‌ಗಳನ್ನು ಮೂರು ತಾಸಿನಲ್ಲಿ ಪರಿಶೀಲಿಸಿ ಪ್ರತಿಬಂಧಕಾದೇಶ ಮಾಡಲಾಗುತ್ತದೆಯೇ? ಆ ವಿಡಿಯೊಗಳಲ್ಲಿ ಮಾನಹಾನಿಯಾಗುವಂಥ ಯಾವುದೇ ಅಂಶಗಳಿಲ್ಲ. ಇಂಥ ನಿರ್ಬಂಧ ಆದೇಶಗಳನ್ನು ಮಾಡಿದರೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳಿಗೆ ಅಡಿಗಲ್ಲಾಗಿರುವ ತನಿಖಾ ಪತ್ರಿಕೋದ್ಯಮದ ಪ್ರಶ್ನೆ ಏನಾಗಬೇಕು? ಮಾಧ್ಯಮಗಳ ವರದಿಯನ್ನೇ ಆಧರಿಸಿ ರಾಜ್ಯ ಸರ್ಕಾರವು ಧರ್ಮಸ್ಥಳದಲ್ಲಿ ಕೊಲೆ ಮಾಡಿರುವ ಹೂತಿರುವ ಶವಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ. ಇದನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದಿದ್ದರು.

Leave a Reply

Your email address will not be published. Required fields are marked *

error: Content is protected !!