March 13, 2026

ಧರ್ಮಸ್ಥಳ: 6ನೇ ಜಾಗದಲ್ಲಿ ಅಸ್ಥಿಪಂಜರ ಪತ್ತೆ: 3ನೇ ದಿನದ ಕಾರ್ಯಾಚರಣೆ ವೇಳೆ ಕೆಲವು ಎಲುಬುಗಳು ಪತ್ತೆ

0
image_editor_output_image-819201715-1753945610793.jpg

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ 3ನೇ ದಿನದ ಶೋಧ ಕಾರ್ಯದ ವೇಳೆ ಕೆಲವು ಅವಶೇಷಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗುತ್ತಿದೆ. ಆದರೆ ಈ ವಿಚಾರವನ್ನು ಎಸ್ಐಟಿ ಇನ್ನೂ ಖಚಿತಪಡಿಸಿಲ್ಲ.

ದೂರುದಾರ ಗುರುತಿಸಿರುವ ನೇತ್ರಾವತಿ ಸ್ನಾನ ಘಟ್ಟದ ಸಮೀಪವಿರುವ ಆರನೇ ಸ್ಥಳದಲ್ಲಿ ಅಗೆಯುವ ವೇಳೆ ಕೆಲವು ಎಲುಬಿನ ಚೂರುಗಳು ಲಭಿಸಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಎಸ್ಐಟಿ ಅಧಿಕಾರಿಗಳು ಗುರುವಾರ ಪೂರ್ವಾಹ್ನ 11:30ರ ಸುಮಾರಿಗೆ ಈಗಾಗಲೇ ದೂರುದಾರ ಗುರುತಿಸಿರುವ 13 ಸ್ಥಳಗಳ ಪೈಕಿ ನೇತ್ರಾವತಿ ನದಿಯ ಬದಿಯಲ್ಲಿರುವ 6ನೇ ಜಾಗದಲ್ಲಿ ಅಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಮೊದಲು ಎರಡು ದಿನಗಳಲ್ಲಿ ಸಾಕ್ಷಿ ದೂರುದಾರ ಗುರುತಿಸಿದ್ದ ಐದು ಜಾಗಗಳಲ್ಲಿ ಎಸ್ಐಟಿ ಅಗೆದ ವೇಳೆ ಮೃತದೇಹದ ಯಾವುದೇ ಅವಶೇಷಗಳು ಸಿಕ್ಕಿರಲಿಲ್ಲ. ಕಾರ್ಯಾಚರಣೆಯ 3ನೇ ದಿನವಾದ ಗುರುವಾರ ಆರನೇ ಸ್ಥಳದಲ್ಲಿ ಉತ್ಖನನ ಮಾಡುವ ವೇಳೆ ಕಳೇಬರದ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!