ವಿಟ್ಲ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ: ವಿಟ್ಲದಲ್ಲಿ ವ್ಯವಸ್ಥಿತ ಬಸ್ ತಂಗುದಾಣಕ್ಕೆ ಆಗ್ರಹಿಸಿದ ಸದಸ್ಯರು
ವಿಟ್ಲ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪುತ್ತೂರು ರಸ್ತೆ ಮತ್ತು ಮಂಗಳೂರು ರಸ್ತೆಯ ಬಸ್ ತಂಗುದಾಣಗಳನ್ನು ವ್ಯವಸ್ಥಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ ಹೇಳಿದರು.
ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು ಮಂಗಳೂರು ರಸ್ತೆಯಲ್ಲಿ ಲಯನ್ಸ್ ಕ್ಲಬ್ ನಿರ್ಮಿಸಿದ ತಂಗುದಾಣ ಕುಸಿತದ ಹಂತದಲ್ಲಿದೆ. ಅದರ ದುರಸ್ತಿಗೆ ಅಗತ್ಯ ಕ್ರಮ ಪಂಚಾಯತಿ ಕೈಗೊಳ್ಳಲಿದೆ. ಪುತ್ತೂರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಬರುವ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ( ಸರಕಾರಿ ಆಸ್ಪತ್ರೆ) ಆಡಳಿತ ವೈದ್ಯಾಧಿಕಾರಿ ವರ್ಗಾವಣೆಗೊಂಡು ಮೂರು ವಾರಗಳಾದರೂ ನೂತನ ವೈದ್ಯಾಧಿಕಾರಿ ನೇಮಕವಾಗಿಲ್ಲ. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ವೈದ್ಯಾಧಿಕಾರಿಯವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅರುಣ್ ಎಂ. ವಿಟ್ಲ ಹೇಳಿದರು.
ವಿ. ಕೆ. ಎಂ. ಆಶ್ರಫ್, ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ವಿಟ್ಲ ಸಹಿತ ಸದಸ್ಯರು ಬೆಂಬಲಿಸಿ ಮಾತನಾಡಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ವಿಟ್ಲ ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ನಿರ್ವಹಣೆಯ ನೇತೃತ್ವ ವಹಿಸಿದ ಪೌರಕೌರ್ಮಿಕರೋರ್ವರಿಗೆ ಹಣ ಇನ್ನೂ ಪಾವತಿಸದ ಬಗ್ಗೆ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸದಸ್ಯ ಜಯಂತ ಪ್ರಸ್ತಾಪಿದ ವಿಷಯಕ್ಕೆ ಪೂರಕವಾಗಿ ಮಾತನಾಡಿದ ಅರುಣ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಹಸೈನಾರ್ ನೆಲ್ಲಿಗುಡ್ಡೆ ಮತ್ತಿತರರು ಜಾತ್ರೆ ಕಳೆದು ಎಂಟು ತಿಂಗಳಾದರೂ ಹಣ ಪಾವತಿಸದೇ ವ್ಯಕ್ತಿಯನ್ನು ಸಂಕಷ್ಟಕ್ಕೆ ಸಿಲುಕಿದ್ದು ಸರಿಯಲ್ಲ ತಕ್ಷಣ ಬಾಕಿ ಹಣ ಪಾವತಿಸಿ ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿಯ ಅಧ್ಯಕ್ಷ ರವಿ ರವೀಶ್ ಎಸ್. ಮುಖ್ಯಾಧಿಕಾರಿ ಕರುಣಾಕರ ವಿ. ಅವರು ಟೆಂಡರ್ ಮೂಲಕ ಸ್ವಚ್ಛತೆ ವಹಿಸಿಕೊಂಡ ಗುತ್ತಿಗೆದಾರರು ಅದಕ್ಕೆ ಹೊಣೆ. ಪಂಚಾಯತಿ ಮೂಲಕ ನೀಡಲು ಕಾನೂನಾತ್ಮಕ ತೊಡಕು ಇದೆ ಎಂದರು.
ಮಾನವೀಯತೆ ದೃಷ್ಟಿಯಿಂದ ಕೆಲವು ಸಂದರ್ಭಗಳಲ್ಲಿ ರಾಜಿ ಆಗಬೇಕಾಗುವುದು ಅನಿವಾರ್ಯ ಎಂಬ ಸದಸ್ಯರ ವಾದವನ್ನು ಅಧ್ಯಕ್ಷರು, ಮುಖ್ಯಾಧಿಕಾರಿ ಪುರಸ್ಕರಿಸಲಿಲ್ಲ. ಚರ್ಚೆ ತಾರಕಕ್ಕೇರಿದಾಗ ಕೆಲವು ಸದಸ್ಯರು ತಾವೇ ಹಣ ಹಾಕಿ ಸಲ್ಲಬೇಕಾದ ಹಣ ನೀಡುವುದಾಗಿ ಘೋಷಿಸಿದರು. ಬಳಿಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವ ನಿರ್ಧಾರಕ್ಕೆ ಬರಲಾಯಿತು.
ವಿಟ್ಲ ದೇವಸ್ಥಾನದ ಪಕ್ಕದ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಯ ಆಗರವಾಗಿದೆ. ಅದನ್ನು ತಕ್ಷಣ ದುರಸ್ತಿ ಪಡಿಸಿ ಸಮರ್ಪಕ ನಿರ್ವಹಣೆಯ ಕ್ರಮಕೈಗೊಳ್ಳುವಂತೆ ಅರುಣ್ ವಿಟ್ಲ ಆಗ್ರಹಿಸಿದರು. ಶಾಲೆಯ ರಸ್ತೆಯಲ್ಲಿ ಒಂದು ಕಡೆ ಮಾತ್ರ ವಾಹನ ನಿಲುಗಡೆ ಅವಕಾಶ ಕಲ್ಪಿಸಬೇಕು ಎಂದು ಅಶೋಕ್ ಕುಮಾರ್ ಶೆಟ್ಟಿ ಒತ್ತಾಯಿಸಿದರು. ಹರೀಶ್ ವಿಟ್ಲ, ವಸಂತ್ ಇದಕ್ಕೆ ಧ್ವನಿಗೂಡಿಸಿದರು
ಕಳೆದ ಸಭೆಗಳಲ್ಲಿ ಕೈಗೊಂಡ ಕೆಲವು ನಿರ್ಣಯಗಳು ಅನುಷ್ಠಾನ ಆಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ಸದಸ್ಯರಾದ ಅರುಣ್ ಎಂ. ವಿಟ್ಲ, ವಿ. ಕೆ. ಎಂ. ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ, ವಸಂತ, ಗೋಪಿಕೃಷ್ಣ, ರಕ್ಷಿತಾ ಸನತ್, ಡೀಕಯ್ಯ, ಜಯಂತ ಸಿ.ಎಚ್, ವಿಜಯಲಕ್ಷ್ಮೀ, ಸುನೀತಾ, ಲತಾವೇಣಿ, ಪದ್ಮಿನಿ, ಶಾಕೀರಾ, ನಾಮನಿರ್ದೇಶಿತ ಸದಸ್ಯರಾದ, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್, ಸಿಬ್ಬಂದಿ ಚಂದ್ರಶೇಖರ ವರ್ಮ, ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.




