ಮಂಗಳೂರು: ಭಾರತಿ ಬಿಲ್ಡರ್ಸ್ ಕಚೇರಿಗೆ ಶೂಟೌಟ್ ಪ್ರಕರಣ: ಆರೋಪಿ ಭೂಗತ ಪಾತಕಿ ರವಿ ಪೂಜಾರಿಯ ಸಹಚರನ ಬಂಧನ
ಮಂಗಳೂರು: ಹನ್ನೊಂದು ವರ್ಷಗಳ ಹಿಂದೆ ಮಂಗಳೂರಿನ ಬಿಜೈನಲ್ಲಿರುವ ಭಾರತಿ ಬಿಲ್ಡರ್ಸ್ ಕಚೇರಿಗೆ ಶೂಟೌಟ್ ನಡೆಸಿದ ಪ್ರಕರಣದ ಆರೋಪಿ ಭೂಗತ ಪಾತಕಿ ರವಿ ಪೂಜಾರಿಯ ಸಹಚರ, ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ನಿವಾಸಿ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂಬಾತ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ ರೆಡ್ಡಿ ಅವರ ಮಾರ್ಗದರ್ಶನದಂತೆ ಉರ್ವ ಪೊಲೀಸರು ಈತನನ್ನು ಮಹಾರಾಷ್ಟ್ರದ ಪಂಡರಾಪುರ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿ ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2014ರಲ್ಲಿ ಈ ಶೂಟೌಟ್ ಪ್ರಕರಣ ನಡೆದಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಬಂಧಿತನಾಗಿದ್ದ ಆರೋಪಿ ಕರಾಡ್ ಗಣೇಶ್ 2015ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.




