ಸುಳ್ಯ: ಮೆಸ್ಕಾಂ ಗುತ್ತಿಗೆದಾರರ ಅಚಾತುರ್ಯ:
ಟ್ಯಾಪಿಂಗ್ ರಬ್ಬರ್ ಮರಕ್ಕೆ ಕಟ್ಟಿದ ವಿದ್ಯುತ್ ಸ್ಟೇ ವಯರ್
ಸುಳ್ಯ: ಅಜ್ಜಾವರ ಗ್ರಾಮದ ರಸ್ತೆ ಬದಿಯಲ್ಲಿ ಹಾದು ಹೋಗುತ್ತಿರುವ 33 ಕೆ.ವಿ. ವಿದ್ಯುತ್ ತಂತಿಯ ಸ್ಟೇ ವಯರ್ ನ್ನು ಕೆಲಸ ವಹಿಸಿಕೊಂಡ ಗುತ್ತಿಗೆದಾರರು ಟ್ಯಾಪಿಂಗ್ ಮಾಡುವ ರಬ್ಬರ್ ಮರಕ್ಕೆ ಕಟ್ಟಿದ್ದು, ಪರಿಣಾಮ ನಿನ್ನೆ ಶಾರ್ಟ್ ಸರ್ಕ್ಯೂಟ್ ಆಗಿ ಸ್ಟೇ ವಯರ್ ನಲ್ಲಿ ವಿದ್ಯುತ್ ಪ್ರವಹಿಸಿ ಮರ ಸುಟ್ಟು ಹೋದ ಘಟನೆ ಅಜ್ಜಾವರದ ಮೇನಾಲ ಸಮೀಪದಲ್ಲಿ ನಡೆದಿದೆ.

ಅಜ್ಜಾವರದಲ್ಲಿ ಕೆಲವು ದಿನಗಳಿಂದ 33 ಕೆ.ವಿ. ವಿದ್ಯುತ್ ನ ಹೊಸ ಲೈನ್ ಎಳೆಯುವ ಕೆಲಸ ನಡೆಯುತ್ತಿದೆ. ಮೇನಾಲ ಸಮೀಪ ಡಾ. ದಿನೇಶ್ ರಾವ್ ರವರ ಮನೆಯ ಎದುರಿನ ರಸ್ತೆಯ ಬದಿಯಲ್ಲಿಯೂ ಒಂದು ಕಂಬ ಹಾಕಲಾಗಿದ್ದು, ಕಂಬಕ್ಕೆ ಆಧಾರವಾಗಿ ಕಟ್ಟಲಾಗಿರುವ ಸ್ಟೇ ವಯರನ್ನು ಕೆಲಸಗಾರರು ದಿನೇಶ್ ರವರ ಜಾಗದಲ್ಲಿದ್ದ ರಬ್ಬರ್ ಮರಕ್ಕೆ ಕಟ್ಟಿದ್ದರು. ಇದನ್ನು ನೋಡಿದ ಡಾ. ದಿನೇಶರು ಕೆಲಸಗಾರರಲ್ಲಿ ಅಪಾಯದ ಕುರಿತು ಕೇಳಿದಾಗ, ಅದು ತಾತ್ಕಾಲಿಕ, ನಾವು ನಾಳೆ ತೆಗೆಯುತ್ತೇವೆಂದು ಹೇಳಿದರೆನ್ನಲಾಗಿದೆ. ಆದರೆ ಸ್ಟೇ ವಯರ್ ವಾರ ಕಳೆದರೂ ತೆರವು ಕಾರ್ಯ ಮಾಡಿರಲಿಲ್ಲ.
ಡಿ.22 ರಂದು ಸಂಜೆ ವಿದ್ಯುತ್ ಕಂಬದಲ್ಲಿ ಶಾರ್ಟ್ ಆಗಿ ರಬ್ಬರ್ ಮರಕ್ಕೆ ಕಟ್ಟಲಾದ ಸ್ಟೇ ವಯರ್ ನಲ್ಲಿ ವಿದ್ಯುತ್ ಪ್ರವಹಿಸಿ ಮರಕ್ಕೆ ಹಾನಿಯಾಗಿತ್ತು. ಡಿ.24 ರ ರಾತ್ರಿ ಮತ್ತೆ ಕಂಬದಲ್ಲಿ ಶಾರ್ಟ್ ಆಗಿ ವಿದ್ಯುತ್ ಪ್ರವಹಿಸಿ ಮರ ಸುಟ್ಟು ಹೋಗಿದೆ. ಈ ಬಗ್ಗೆ ದಿನೇಶರು ಮೆಸ್ಕಾಂ ಇಲಾಖೆಯವರಿಗೆ ದೂರಿಕೊಂಡಿದ್ದು, ಅವರು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ದಿನೇಶ್ ರಾವ್ ರವರು 33ಕೆ.ವಿ. ವಿದ್ಯುತ್ ಲೈನ್ ನ ಸ್ಟೇ ವಯರ್ ರಬ್ಬರ್ ಮರಕ್ಕೆ ಕಟ್ಟಿದ್ದೇ ಅವೈಜ್ಞಾನಿಕ. ಆಗಲೇ ನಾವು ಅವರಿಗೆ ವಯರ್ ತೆರವು ಮಾಡುವಂತೆ ಹೇಳಿದ್ದೇನೆ. ಅವರು ತೆರವು ಮಾಡಿಲ್ಲ. ಮೊನ್ನೆಯೂ ಲೈನ್ ಶಾರ್ಟ್ ಆಗಿ ಮರ ಹಾನಿಯಾದಾಗಲೂ ತಿಳಿಸಿದ್ದೇವೆ. ನಿನ್ನೆ ರಾತ್ರಿ ಮತ್ತೆ ಬೆಂಕಿ ಪ್ರವಹಿಸಿ ಮರ ಸುಟ್ಟು ಹೋಗಿದೆ. ನಾವು ಮೆಸ್ಕಾಂ ಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.





