March 12, 2026

ಪೂಂಚ್‌ನಲ್ಲಿ ಪಾಕ್‌ ಗುಂಡಿನ ದಾಳಿ: 4 ಮಕ್ಕಳು ಸಹಿತ 12 ಸಾವು, 40 ಮಂದಿಗೆ ಗಾಯ

0
uri-jammu-sindoor.webp

ಜಮ್ಮು-ಕಾಶ್ಮೀರ: ಪೂಂಚ್ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆಯು ಬುಧವಾರ ತೀವ್ರ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ 12 ನಾಗರಿಕರು ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 4 ಮಕ್ಕಳು, ಇಬ್ಬರು ಮಹಿಳೆಯರೂ ಇದ್ದಾರೆ.

ಬುಧವಾರ ನಸುಕಿನಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ (ಪಿಒಕೆ) ಭಯೋತ್ಪಾದಕ ನೆಲೆಗಳನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದ್ದವು. ಇದರ ಬೆನ್ನಲ್ಲೇ ಜಮ್ಮು-ಕಾಶ್ಮೀರ ಗಡಿ ಜಿಲ್ಲೆಗಳಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಶುರುವಾಗಿದೆ.

ಪೂಂಚ್‌ ಮಾತ್ರವಲ್ಲದೆ ರಜೌರಿ ಜಿಲ್ಲೆ ಹಾಗೂ ಕುಪ್ವಾಡ ಜಿಲ್ಲೆಯ ಉರಿ, ಕರ್ನಾಹ್‌, ತಂಗಧರ್ ಸೆಕ್ಟರ್‌ಗಳಲ್ಲಿಯೂ ತೀವ್ರ ಗುಂಡಿನ ದಾಳಿ ನಡೆದಿದೆ. ಫಿರಂಗಿಗಳನ್ನು ಬಳಸಿಯೂ ದಾಳಿ ನಡೆಸಲಾಗಿದ್ದು, ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿ ಹಲವಾರು ಮನೆಗಳು ಹಾನಿಗೊಂಡಿವೆ. ‍ಪೂಂಚ್‌ನಲ್ಲಿರುವ ಅರಣ್ಯ ಇಲಾಖೆ ಹಾಗೂ ವಿಶ್ವಸಂಸ್ಥೆ ಕೇಂದ್ರ ಕಟ್ಟಡಗಳಿಗೆ ಹಾನಿಯಾಗಿದೆ.

ಢಾಕಿ ಗ್ರಾಮದಲ್ಲಿ 150ಕ್ಕೂ ಅಧಿಕ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ತಿರುಗೇಟು ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜತೆಗೆ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದು ಶೂರತ್ವವಲ್ಲ, ಹೇಡಿ ಕೃತ್ಯ ಎಂದೂ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!